×
Ad

ಜನಸಾಮಾನ್ಯರಿಗೆ ಉಚಿತ ಕಾನೂನು ಸೇವೆಗಳಿಗಾಗಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಕ್ಕೆ ನಿರ್ಧಾರ: ಶಶಿಧರ್ ಶೆಟ್ಟಿ

Update: 2025-09-23 21:23 IST

ಉಡುಪಿ, ಸೆ.23: ರಾಜ್ಯದ ಜನಸಾಮಾನ್ಯರಿಗೆ, ಗ್ರಾಮೀಣ ಭಾಗದ ಜನರಿಗೆ ಎದುರಾಗುವ ಕಾನೂನು ತೊಡಕು ಗಳನ್ನು ಪರಿಹರಿಸಲು, ಅವರಿಗೆ ಬೇಕಾದ ಕಾನೂನು ನೆರವನ್ನು ನೀಡಲು ಸಹಾಯ ಮಾಡಲು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕ ರನ್ನು (ಪಿಎಲ್‌ವಿ) ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರೊಂದಿಗೆ ನಡೆಸಿದ ವಿಡೀಯೋ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಅವರು ಮಾತನಾಡುತಿದ್ದರು. ಜನರ ಮಧ್ಯೆ, ಪ್ರಾಮಾಣಿಕವಾಗಿ ಕೆಲಸ ಮಾಡಲು ಆಸಕ್ತರಾಗಿರುವ, ಜನರ ಸಮಸ್ಯೆ ಗಳಿಗೆ ಸ್ಪಂದಿಸಲು ನಿಜವಾದ ಕಾಳಜಿ ಹೊಂದಿರುವ ಯಾರು ಕೂಡಾ ಪಿಎಲ್‌ವಿ ಆಗಿ ಕಾರ್ಯನಿರ್ವಹಿಸಲು ಅವಕಾಶ ವಿದೆ ಎಂದು ಅವರು ತಿಳಿಸಿದರು.

ಪ್ರತಿ ಜಿಲ್ಲೆಯಲ್ಲಿ 50ರಿಂದ 100ಮಂದಿಯನ್ನು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದಲ್ಲಿ 25ರಿಂದ 50 ಮಂದಿಯನ್ನು ಅರೆಕಾಲಿಕ ಕಾನೂನು ಸ್ವಯಂಸೇವಕರಾಗಿ ನೇಮಿಸಿಕೊಳ್ಳುವ ಯೋಜನೆ ಇದೆ. ಇದಕ್ಕಾಗಿ ಜಿಲ್ಲಾ ಅಥವಾ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಅವರು ವಿವರಿಸಿದರು.

ಪಿಎಲ್‌ವಿ ಆಗಲು ಕನಿಷ್ಠ ಅರ್ಹತೆ ಎಸೆಸೆಲ್ಸಿ ತೇರ್ಗಡೆ. ಜನಸೇವೆ ಮಾಡಲು ಪ್ರಾಮಾಣಿಕ ಇಚ್ಛೆ ಹೊಂದಿರುವ ಯಾರೇ ಆಗಲಿ, ಯಾವುದೇ ವೃತ್ತಿಯಲ್ಲಿರಲಿ ಅವರಿಗೆ ಅವಕಾಶವಿದೆ. ನಿವೃತ್ತ ನೌಕರರಿಗೆ, ಜನರ ಮಧ್ಯೆ ಕೆಲಸ ಮಾಡಿದವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಕಾನೂನಿನ ತಿಳುವಳಿಕೆ ಉಳ್ಳ ಅನುಭವಸ್ಥರಿಗೆ ಆದ್ಯತೆ ನೀಡಲಾಗುತ್ತದೆ. ನಿವೃತ್ತ ಅಥವಾ ಸೇವೆಯಲ್ಲಿರುವ ಶಿಕ್ಷಕರು, ನಿವೃತ್ತ ಸರಕಾರಿ ನೌಕರರು, ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಗ್ರಾಪಂ ಸೇರಿದಂತೆ ಮಾಜಿ ಜನಪ್ರತಿನಿಧಿಗಳು, ಲೈಂಗಿನ ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು, ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು, ಶಿಕ್ಷಕರು, ಕಾನೂನು ಕಲಿಯುತ್ತಿರುವ ವಿದ್ಯಾರ್ಥಿಗಳು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ ಆಸಕ್ತರು, ಸೇವಾ ನಿರತ ಎನ್‌ಜಿಓಗಳ ಸಿಬ್ಬಂದಿಗಳು ಅರ್ಜಿ ಹಾಕಬಹುದು ಎಂದರು.

ಸದಾ ಜನರ ಮಧ್ಯದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು,ಸ್ವಸಹಾಯ ಸಂಘಗಳ ಸದಸ್ಯರು, ನಿವೃತ್ತ ಸೈನಿಕರು ಸೇರಿದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅನುಮತಿಸುವ ಯಾರೂ ಕೂಡಾ ಪಿಎಲ್‌ವಿ ಆಗಿ ಕಾರ್ಯನಿರ್ವಹಿಸಬಹುದು ಎಂದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಪ್ರಾಧಿಕಾರದ ಮಾರ್ಗಸೂಚಿಗಳಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದಲ್ಲಿ ರಚಿಸುವ ಸಮಿತಿಯೊಂದು ಪಿಎಲ್‌ವಿಗಳನ್ನು ಆಯ್ಕೆ ಮಾಡಲಿದೆ ಎಂದು ಶಶಿಧರ್ ಶೆಟ್ಟಿ ಹೇಳಿದರು.

ರಾಜ್ಯ ಕಾನೂನು ಪ್ರಾಧಿಕಾರದೊಂದಿಗೆ ಈಗಾಗಲೇ ಒಪ್ಪಂದ ಮಾಡಿ ಕೊಂಡಿರುವ ಎರಡು ಕಾನೂನು ಸಂಘಟನೆ ಗಳು ಮಾಸ್ಟರ್ ತರಬೇತುದಾರ ರಿಗೆ ಇದಕ್ಕೆ ಬೇಕಾದ ತರಬೇತಿ ನೀಡಲಿವೆ. ಈ ಮಾಸ್ಟರ್ ತರಬೇತುದಾರರು ಜಿಲ್ಲಾ ಮತ್ತು ತಾಲೂಕು ಮಟ್ಟದ ಪಿಎಲ್‌ವಿಗಳಿಗೆ ಬೇಕಾದ ತರಬೇತಿ ನೀಡಲಿದ್ದಾರೆ. ತರಬೇತಿಯ ಬಳಿಕ ಒಂದು ವರ್ಷಕ್ಕೆ ನೇಮಕಗೊಳ್ಳುವ ಸ್ವಯಂ ಸೇವಕರಿಗೆ ಅವರ ಸೇವೆಗನುಗುಣವಾಗಿ ಪ್ರತಿದಿನ 750ರೂ. ಗೌರವ ಧನ ನೀಡಲಾಗುತ್ತದೆ. ಅವರ ಕಾರ್ಯ, ಸೇವೆ ತೃಪ್ತಿಕರವಾಗಿದ್ದರೆ ಒಂದು ವರ್ಷದ ಬಳಿಕ ಅವರನ್ನು ಸಮಿತಿ ಮುಂದುವರಿ ಸಲಿದೆ ಎಂದು ಶಶಿಧರ ಶೆಟ್ಟಿ ವಿವರಿಸಿದರು.

ಉಡುಪಿ ಜಿಲ್ಲೆಯಲ್ಲಿ: ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಅವರು ಉಡುಪಿ ನ್ಯಾಯಾಲಯ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕುಂದಾಪುರ ಮತ್ತು ಕಾರ್ಕಳ ತಾಲೂಕು ಸೇವಾ ಪ್ರಾದಿಕಾರದಲ್ಲಿ ಪಿಎಲ್‌ವಿ ಆಗಿ ಸೇವೆ ಸಲ್ಲಿಸಲು ಬಯಸುವ ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಸಮಿತಿಯಲ್ಲಿ, ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾ ನ್ಯಾಯಾಧೀಶರು ಅಧ್ಯಕ್ಷರಾಗಿದ್ದು, ಸದಸ್ಯ ಕಾರ್ಯ ದರ್ಶಿ ಹಾಗೂ ಅಧ್ಯಕ್ಷರು ಆಯ್ಕೆ ಮಾಡುವ ಕಾನೂನು ತಿಳುವಳಿಕೆ ಇರುವ ಅರ್ಹ ವ್ಯಕ್ತಿ ಸದಸ್ಯರಾಗಿರುತ್ತಾರೆ. ಅವರು ಪಿಎಲ್‌ವಿಗಳ ಆಯ್ಕೆ ಮಾಡುವರು. ಆಸಕ್ತರಿಗೆ ಅರ್ಜಿ ಸಲ್ಲಿಸಲು ಅ.3 ಕೊನೆಯ ದಿನವಾಗಿದೆ. ಅ.20ರೊಳಗೆ ಪಿಎಲ್‌ವಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News