×
Ad

ಬೈಂದೂರಿನಲ್ಲಿ ಧಾರಾಕಾರ ಮಳೆ; ಭಾರೀ ಗಾಳಿ-ಮಳೆಯ ಎಚ್ಚರಿಕೆ

Update: 2025-09-29 20:25 IST

ಉಡುಪಿ, ಸೆ.29: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷ ವಾಗಿ ಬೈಂದೂರು ತಾಲೂಕಿನ ವಿವಿದೆಡೆ ಭಾರೀ ಮಳೆಯಾಗಿದ್ದು, ಮುಂದಿನ ಅಕ್ಟೋಬರ್ 2ರವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯೊಂದಿಗೆ ಗಾಳಿಯೂ ಬೀಸುವ ಹಾಗೂ ಅರಬ್ಬಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಎಚ್ಚರಿಕೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ನೀಡಿದೆ.

ಇದರಿಂದಾಗಿ ಸಮುದ್ರದ ಕಡೆಯಿಂದ ಬಲವಾದ ಗಾಳಿ ಬೀಸಲಿದ್ದು, ಸಮುದ್ರ ಪ್ರಕ್ಷುಬ್ದವಾಗಿದ್ದು, ಎತ್ತರದ ಅಲೆಗಳು ದಡವನ್ನು ಅಪ್ಪಳಿಸಲಿವೆ ಎಂದು ಹವಾಮಾನ ಮುನ್ಸೂಚನೆಯನ್ನು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ತುರ್ತು ಸೇವೆಗೆ ಶುಲ್ಕ ರಹಿತ 1077, ದೂ.ಸಂಖ್ಯೆ: 0820-2574802, ತಹಶೀಲ್ದಾರರ ಕಚೇರಿಯ ಸಹಾಯವಾಣಿ ಸಂಖ್ಯೆಗಳಾದ ಉಡುಪಿ :0820-2520417, ಕುಂದಾಪುರ:08254-230357, ಕಾಪು: 0820- 2551444, ಬ್ರಹ್ಮಾವರ:0820-2560494 ಹಾಗೂ ಬೈಂದೂರು: 08254 -251657 ಮತ್ತು ಉಡುಪಿ ನಗರಸಭೆಯ ಸಹಾಯವಾಣಿ ಸಂಖ್ಯೆ: 0820-2593366 ಅಥವಾ 0820-2520306 ಅನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಂದೂರಿನಲ್ಲಿ 106ಮಿ.ಮೀ ಮಳೆ: ಕಳೆದ ಕೆಲವು ದಿನಗಳಲ್ಲಿ ಸುರಿಯುತ್ತಿರುವ ಮಳೆ ರವಿವಾರ ಬಿರುಸು ಪಡೆ ದಿದ್ದು, ಜಿಲ್ಲೆಯಲ್ಲಿ ಸರಾಸರಿ 42ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಅಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 106.6ಮಿ.ಮೀ. ಮಳೆಯಾದ ವರದಿ ಬಂದಿದೆ.

ಉಳಿದಂತೆ ಕುಂದಾಪುರದಲ್ಲಿ 50.9ಮಿ.ಮೀ, ಹೆಬ್ರಿಯಲ್ಲಿ 26.8, ಕಾರ್ಕಳದಲ್ಲಿ 23.8, ಬ್ರಹ್ಮಾವರದಲ್ಲಿ 18.6, ಉಡುಪಿಯಲ್ಲಿ 16.8 ಹಾಗೂ ಕಾಪುವಿನಲ್ಲಿ 10.1ಮಿ.ಮೀ. ಮಳೆಯಾಗಿರುವುದಾಗಿ ಮಾಹಿತಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News