×
Ad

ಅಕ್ಟೋಬರ್ ಅಂತ್ಯಕ್ಕೆ ಮೂರು ಧೂಮಕೇತುಗಳು ಗೋಚರ

Update: 2025-10-19 19:48 IST

ಉಡುಪಿ, ಅ.19: ಅಕ್ಟೋಬರ್ ಅಂತ್ಯಕ್ಕೆ ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯುತ್ತಿರುವ ಅವು ಲೆಮೆನ್, ಸ್ವಾನ್ ಹಾಗೂ ಅಟ್ಲಸ್ ಎಂಬ ಮೂರು ಧೂಮಕೇತುಗಳು ಗೋಚರಿಸಲಿವೆ. ಇವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ ಎಂದು ಎಂದು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉಡುಪಿ ತಿಳಿಸಿದ್ದಾರೆ.

ಲೆಮೆನ್ ಅ.21ರಂದು ಭೂಮಿಗೆ ಸುಮಾರು 90 ಮಿಲಿಯ ಕಿ.ಮೀ. ಸಮೀಪ ಬಂದು ಸಂಜೆಯ ಕೆಲ ಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು ಸ್ವಾತಿ ನಕ್ಷತ್ರದ ಸಮೀಪ ಕಾಣಿಸಲಿದೆ. ನ.8ರಂದು ಸೂರ್ಯ ಸಮೀಪ ತಲುಪಿ ಹಿಂತಿರುಗುತ್ತದೆ. ಸುಮಾರು 1350 ವರ್ಷಗಳಿಗೊಮ್ಮೆ ಈ ಲೆಮೆನ್ ಧೂಮಕೇತು ಸೂರ್ಯನ ಸಮೀಪ ಬಂದು ಹೋಗುತ್ತಿದೆ.

ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್ ಭಾರೀ ವಿಶೇಷ. ಅದು ಉಳಿದ ಲೆಮನ್ ಹಾಗೂ ಸ್ವಾನ್ ಧೂಮ ಕೇತುಗಳಂತೆ ನಮ್ಮ ಸೌರವ್ಯೆಹದ ಹೊರವಲಯ ಊರ್ಸ್ ಕ್ಲೌಡ್‌ನಿಂದ ಬಂದುದಲ್ಲ. ಈ ಅಟ್ಲಸ್ ನಮ್ಮ ಸೌರವ್ಯೆಹದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ ಎಂದು ತಿಳಿದಿದೆ. ಅದರ ಅಧ್ಯಯನ ಹೊಸ ಹೊಸ ವಿಚಾರಗಳನ್ನು ಬಹಿರಂಗ ಪಡಿಸಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೆ ಹೊಸ ಆಯಾಮವನ್ನು ಕೊಡುತ್ತಿದೆ.

ಚಂದ್ರನನ್ನ ಬಿಟ್ಟರೆ ರಾತ್ರಿಯ ಆಕಾಶದಲ್ಲಿ ಧೂಮಕೇತುಗಳೇ ಚೆಂದ. ಸೂರ್ಯನ ಸಮೀಪದಲ್ಲಿರುವಾಗ ಉದ್ದುದ್ದ ಬಾಲಬೆಳೆಸಿಕೊಂಡು ಖಗೋಳ ವೀಕ್ಷಕನ ಮನ ಸೂರೆಗೊಳ್ಳುತ್ತವೆ. ಈಗ ಈ ಧೂಮಕೇತುಗಳೂಂದಿಗೆ ಪ್ರತೀವರ್ಷ ಈ ಸಮಯದಲ್ಲಿ ಸಂಭವಿಸುವ ಹ್ಯಾಲಿ ಧೂಮಕೇತುವಿನ ದೂಳಿನ ಉಲ್ಕಾಪಾತ, ಅಮಾವಾಸ್ಯೆಯ ಕತ್ತಲ ಆಕಾಶ ವನ್ನು ರಂಗೇರಿಸಲಿವೆ ಎಂದು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉಡುಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News