ಬಂಟಕಲ್ಲು: ಪ್ರತಿಭಾ ಪುರಸ್ಕಾರ- ಸಾಧಕರಿಗೆ ಸನ್ಮಾನ
ಶಿರ್ವ, ಅ.19: ರಾಜಾಪುರ ಸಾರಸ್ವತ ಸೇವಾ ವೃಂದ ವತಿಯಿಂಜ 29ನೇ ವರ್ಷದ ದುರ್ಗಾಹೋಮ ಸೇವಾ-ಪ್ರತಿಭಾ ಪುರಸ್ಕಾರ-ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ರವಿವಾರ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾ ಪರಮೇಶ್ವರೀ ದೇವಳದಲ್ಲಿ ಆಯೋಜಿಸಲಾಗಿತ್ತು.
ಪ್ರಗತಿಪರ ಕೃಷಿಕ ಲಕ್ಷ್ಮಣ ನಾಯಕ್, ಬೆದ್ರಬೆಟ್ಟು, ನಿಂಜೂರು, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಭುವನೇಶ್ ಪ್ರಭು ಹಿರೇಬೆಟ್ಟು, ಉತ್ತಮ ಚಲನಚಿತ್ರ ಪ್ರಶಸ್ತಿ ವಿಜೇತ ಲೈಟ್‌ಹೌಸ್ ಚಲನಚಿತ್ರದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಮೋಂತಿಮಾರು ಶ್ರೀದೇವಳದ ಆಡಳಿತ ಮೊಕ್ತೇಸರರು ಹಾಗೂ ಸಹಕಾರಿ ಕ್ಷೇತ್ರದ ಧುರೀಣ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ಸಾರಸ್ವತರು ಶ್ರಮ ಜೀವಿಗಳು. ಇಂದು ಶೇ.95 ಅಕ್ಷರಸ್ಥರಾಗಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಾದರಿಯಾಗಿ ಮುಂದೆ ಬಂದಿದ್ದಾರೆ. ಈಗಿನ ಪವರ್‌ಫುಲ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾಧನಾ ಶಿಖರವನ್ನು ಏರಿದವರು ನಮ್ಮ ಸಮಾಜಕ್ಕೆ ಹೆಮ್ಮೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕೇರಳ ರಾಜ್ಯದ ಮಂಜೇಶ್ವರ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಮಾತನಾಡಿ, ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಸಮಾಜದ ಬಗ್ಗೆ ಕಾಳಜಿ ವಹಿಸಿ ಮಾಡಬೇಕು ಎಂದರು.
ಕಾರವಾರ ಸರಕಾರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಶಾಂತಲಾ ಮಾತನಾಡಿ, ಇಂದು ಸಮಾಜದ ವಿದ್ಯಾರ್ಥಿಗಳು ಸಾಧನೆ ಮಾಡಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿ ಕೊಳ್ಳುತ್ತಿರುವುದು ಅಭಿಮಾನದ ಸಂಗತಿ ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಪ್ರತಿಭೆ ವೀಣಾವಾದಕಿ ಶ್ರೇಯಾ ಯು.ನಾಯಕ್ ಇವರನ್ನು ಸನ್ಮಾನಿಸಲಾಯಿತು.
ಸೇವಾ ವೃಂದದ ಸದಸ್ಯರಾದ ರಾಮದಾಸ್ ಪ್ರಭು, ಉಮೇಶ ಪಾಟ್ಕರ್ ಪರಿಚುಸಿದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು. ಅನಂತರಾಮ ವಾಗ್ಲೆ, ರಾಘವೇಂದ್ರ ನಾಯಕ್ ಪಾಲಮೆ ಸಹಕರಿಸಿದರು. ಬಾಲ ಪ್ರತಿಭೆ ಕುಮಾರಿ ಶ್ರೇಯಾ ಯು.ನಾಯಕ್ ಇವರಿಂದ ವೀಣಾ ವಾದನ ಕಾರ್ಯಕ್ರಮ ಜರುಗಿತು.