×
Ad

ಕಾರ್ಕಳ ನಿಟ್ಟೆಯ ಅಭಿಷೇಕ್ ಆತ್ಮಹತ್ಯೆ ಪ್ರಕರಣ| ಹನಿಟ್ರ್ಯಾಪ್ ಸಂಬಂಧಿತ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ: ಎಸ್ಪಿ ಹರಿರಾಂ ಶಂಕರ್

Update: 2025-10-19 21:14 IST

ಹರಿರಾಂ ಶಂಕರ್

ಉಡುಪಿ, ಅ.19: ಕಾರ್ಕಳ ತಾಲೂಕಿನ ನಿಟ್ಟೆ ಪರಪ್ಪಾಡಿಯ ಅಭಿಷೇಕ್ ಆಚಾರ್ಯ(23) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕಷವಾಗಿ ತನಿಖೆ ನಡೆಸಲಾಗಿದ್ದು, ಇದರಲ್ಲಿ ಈವರೆಗೆ ಹನಿಟ್ರ್ಯಾಪ್ ಸಂಬಂಧಿತ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಯುವತಿ ಸೇರಿದಂತೆ ನಾಲ್ವರು ಗೆಳೆಯರು ಹಣಕ್ಕಾಗಿ ಬ್ಲಾಕ್‌ಮೆಲ್ ಮಾಡಿ ಕಿರುಕುಳ ನೀಡುತ್ತಿರುವುದಾಗಿ ಡೆತ್‌ನೋಟು ಬರೆದಿಟ್ಟು ಮಂಗಳೂರು ಲೇಡಿ ಗೋಷನ್ ಆಸ್ಪತ್ರೆಯ ಬಯೋ ಮೆಡಿಕಲ್ ಆಗಿದ್ದ ಅಭಿಷೇಕ್ ಆಚಾರ್ಯ ಅ.9ರಂದು ಬೆಳ್ಮಣ್‌ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಆರೋಪಿಗಳ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಮೊಬೈಲ್, ಬ್ಯಾಂಕ್ ವಹಿವಾಟು, ಫೋನ್ ಕರೆ ಹಾಗೂ ಚಾಟ್ ದಾಖಲೆಗಳನ್ನು ಆಧರಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅದೇ ರೀತಿ ಅಭಿಷೇಕನ ಸ್ನೇಹಿತರು, ಬಂಧುಗಳು ಮತ್ತು ಸಂಬಂಧಿಕರನ್ನು ಕೂಡ ವಿಚಾರಣೆ ಮಾಡಿದ್ದಾರೆ.

ಯುವತಿ ವಿಡಿಯೋ ಕಳುಹಿಸಿಲ್ಲ: ‘ಆರೋಪಿ ಯುವತಿಯ ಮೊಬೈಲ್‌ನಲ್ಲಿ ಯಾವುದೇ ರೀತಿಯ ಅಶ್ಲೀಲ ಫೋಟೋ ಅಥವಾ ವಿಡಿಯೋಗಳು ಸಿಕ್ಕಿಲ್ಲ ಮತ್ತು ಆಕೆ ಯಾವುದೇ ವಿಡಿಯೋವನ್ನು ಯಾರಿಗೂ ಕಳುಹಿಸಿರುವುದಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅಭಿಷೇಕ್ ಯುವತಿಗೆ ಕಳುಹಿಸಿದ್ದ ಹಣವನ್ನು ಅವಳು ಅದೇ ದಿನ ವಾಪಾಸ್ಸು ಕೊಟ್ಟಿರುವುದು ಕಂಡು ಬಂದಿದೆ’ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಆರೋಪಿ ಯುವತಿಯ ಅಶ್ಲೀಲ ವಿಡಿಯೋವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಸಹೋದ್ಯೋಗಿ ಗಳ ವಾಟ್ಸಾಪ್ ಗ್ರೂಪ್‌ಗೆ ಹಂಚಿದ್ದು, ಈ ವಿಷಯ ತಿಳಿದ ನಂತರ, ಆಕೆ ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಆತನಿಗೆ ತಿಳಿಸಿದ್ದಳು. ಈಗ ವೈರಲ್ ಆಗುತ್ತಿರುವ ವಿಡಿಯೋವನ್ನು ಆರೋಪಿ ಯುವತಿಯ ಸ್ನೇಹಿತೆಯೇ ತನ್ನ ಉಡುಪು ಬದಲಿಸುವ ಸಮಯದಲ್ಲಿ ಸ್ವತಃ ರೆಕಾರ್ಡ್ ಮಾಡಿ, ಆ ಯುವತಿಗೆ ಖಾಸಗಿ ರೀತಿಯಲ್ಲಿ ವಾಟ್ಸಾಪ್ ಮೂಲಕ ಕಳುಹಿಸಿದ್ದಳು. ಆದರೆ ಆ ವಿಡಿಯೋವನ್ನು ಅಭಿಷೇಕ್, ಯುವತಿಯ ವಾಟ್ಸಾಪ್ ಮೂಲಕ ಪಡೆದಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.

ಅಭಿಷೇಕ್ ಮೊಬೈಲ್ ಎಫ್‌ಎಸ್‌ಎಲ್‌ಗೆ!

ಅಭಿಷೇಕ್ನ ಮೊಬೈಲ್‌ನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್‌ಐಎಲ್‌ಗೆ ಕಳುಹಿಸಲಾಗಿದ್ದು, ಅದರಲ್ಲಿನ ವಿವರದ ಮಾಹಿತಿ ಪಡೆಯಲು ಬಾಕಿ ಇದೆ. ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಆರೋಪಿ, ಯುವತಿ ಯೋರ್ವಳ ಸ್ನೇಹಿತೆಯ ಉಡುಪು ಬದಲಿಸುವ ವಿಡಿಯೋ ತೆಗೆದ ಕಾರಣ ಹಾಗೂ ಅದನ್ನು ದುರುದ್ದೇಶಕ್ಕಾಗಿ ಬಳಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಡೆತ್‌ನೋಟ್‌ನಲ್ಲಿನ ಕೈಬರಹ ದೃಢೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ಈ ಬಗ್ಗೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೃತ ಅಭಿಷೇಕ್ ಮತ್ತು ಆರೋಪಿ ಯುವತಿ ಕುರಿತು ಅಶ್ಲೀಲ ಪೋಸ್ಟ್‌ಗಳು ಹರಿದಾಡುತ್ತಿದ್ದು, ಇದು ಕಾನೂನಾತ್ಮಕವಾಗಿ ಶಿಕ್ಷಾರ್ಹ ವಾಗಿವೆ. ಈ ಕುರಿತು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹರ್ಷ ಪ್ರಿಯಂವದ, ಅಭಿಷೇಕ್ ಅವರ ಕುಟುಂಬ ಹಾಗೂ ಸ್ಥಳೀಯ ನಾಯಕರೊಂದಿಗೆ ನೇರವಾಗಿ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಡ್ರೆಸ್ ಬದಲಿಸುವ ವಿಡಿಯೋದಲ್ಲಿ ಕಾಣಿಸಿಕೊಂಡ ಯುವತಿ, ತನ್ನ ಅನುಮತಿಯಿಲ್ಲದೆ ವಿಡಿಯೋ ತೆಗೆದ ಬಗ್ಗೆ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿದೆ. ಅದೇ ರೀತಿ, ಆರೋಪಿ ಯುವತಿಯ ಖಾಸಗಿ ವಿಡಿಯೋ ವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ ಪ್ರಕರಣದ ಬಗ್ಗೆಯೂ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ’

-ಹರಿರಾಂ ಶಂಕರ್, ಎಸ್ಪಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News