ಉಡುಪಿ ಜಿಲ್ಲೆಯ ಹಲವೆಡೆ ಸಿಡಿಲು ಬಡಿದು ಮನೆಗಳಿಗೆ ಹಾನಿ
ಉಡುಪಿ, ಅ.20: ರವಿವಾರ ಸಂಜೆ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು ಸಹಿತ ಸುರಿದ ಮಳೆಯಿಂದ ಅನೇಕ ಮನೆಗಳಿಗೆ ಹಾನಿಯಂಟಾಗಿದೆ. ಸಿಡಿಲು ಬಡಿದು ಮೂರು ಮನೆಗಳಿಗೆ ಹಾನಿಯಾಗಿದೆಯಲ್ಲದೇ, ಎರಡು ಜಾನುವಾರುಗಳು ಅಸುನೀಗಿವೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
ಬೈಂದೂರು ತಾಲೂಕು ಮರವಂತೆ ಗ್ರಾಮದ ಗಿರಿಜಾ ದೇವಾಡಿಗ ಎಂಬವರ ವಾಸದ ಮನೆಗೆ ರವಿವಾರ ರಾತ್ರಿ ಸಿಡಿಲು ಬಡಿದು ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ ಸುಮಾರು 50ಸಾವಿರಕ್ಕೂ ಅಧಿಕ ಮೌಲ್ಯದ ಸೊತ್ತು ಹಾನಿಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ.
ಕುಂದಾಪುರ ತಾಲೂಕು ಅಂಪಾರು ಗ್ರಾಮದ ಶಾರದ ಬಿನ್ ಚಿಕ್ಕಮ್ಮ ಬಾಳ್ಕಟ್ಟು ಎಂಬವರ ಮನೆಗೆ ಕಳೆದ ರಾತ್ರಿ ಸಿಡಿಲು ಬಡಿದು ಮನೆಯ ವಿದ್ಯುತ್ ಸಂಪರ್ಕ ಹಾನಿಗೊಂಡಿರುವುದಲ್ಲದೇ, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. 35 ಸಾವಿರ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ಪಡುಗ್ರಾಮದ ಶಾಂತಾರಾಮ ಕೋಟ್ಯಾನ್ ಎಂಬವರ ಮನೆಗೆ ಶನಿವಾರ ರಾತ್ರಿ ಸಿಡಿಲು ಬಡಿದು ಅಪಾರ ಹಾನಿಯುಂಟಾಗಿದೆ. ಸಿಡಿಲಿನಿಂದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಮನೆಯ ವಯರಿಂಗ್, ವಿದ್ಯುತ್ ಉಪಕರಣ, ಟಿವಿ, ಫ್ರಿಜ್ ಸೇರಿದಂತೆ ಅನೇಕ ಗೃಹೋಪಕರಣಗಳು ಸುಟ್ಟು ಕರಕಲಾಗಿವೆ. ಲಕ್ಷಾಂತರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಜಾನೆಟ್ ಮೆಂಡೋನ್ಸಾ ಇವರ ಮನೆಯ ಹಟ್ಟಿಯಲ್ಲಿದ್ದ ಎರಡು ಜಾನುವಾರುಗಳು ಸಿಡಿಲು ಬಡಿದು ಮೃತಪಟ್ಟಿವೆ ಎಂದು ಕಾರ್ಕಳ ತಹಶೀಲ್ದಾರರ ಕಚೇರಿಯ ಪ್ರಾಥಮಿಕ ವರದಿ ತಿಳಿಸಿದೆ.
ರವಿವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 15.3ಮಿ.ಮೀ.ಮಳೆಯಾಗಿದೆ. ಕಾರ್ಕಳದಲ್ಲಿ 16.4, ಕುಂದಾಪುರದಲ್ಲಿ 15.6, ಉಡುಪಿಯಲ್ಲಿ 18.3, ಬೈಂದೂರಿನಲ್ಲಿ 10.0, ಬ್ರಹ್ಮಾವರದಲ್ಲಿ 10.6, ಕಾಪುವಿನಲ್ಲಿ 21.7 ಹಾಗೂ ಹೆಬ್ರಿಯಲ್ಲಿ 17.9ಮಿ.ಮೀ. ಮಳೆಯಾಗಿದೆ.