ಕುವೆಂಪು ಬರಹಗಳಲ್ಲಿ ಜೀವಪರ ಕಾಳಜಿ ಕಾಣಲು ಸಾಧ್ಯ: ಡಾ.ಅನಂತರಾಮ ನಾಯಕ್
ಉಡುಪಿ, ಡಿ.18: ಕುವೆಂಪು ಅವರ ಬರಹಗಳಲ್ಲಿ ಜೀವಪರ ಅಂಶಗಳ ಕಾಳಜಿಯನ್ನು ಕಾಣಲು ಸಾಧ್ಯವಾಗುತ್ತದೆ. ಅವರ ಪ್ರಖರ ಮೌಢ್ಯ ವಿರೋಧಿ ಚಿಂತನೆಯನ್ನು ಯುವ ಸಮುದಾಯ ಆಸ್ಥೆಯಿಂದ ಅರ್ಥ ಮಾಡಿಕೊಳ್ಳುವ ಮೂಲಕ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಅನಂತ ರಾಮ ನಾಯಕ್ ಹೇಳಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಜಿಲ್ಲೆ, ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಕುವೆಂಪು ಅವರ ವಿಚಾರ ಸಾಹಿತ್ಯ ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಪಠ್ಯಗಳನ್ನು ಮತ್ತೆ ಮತ್ತೆ ಓದುವ ಮೂಲಕ ಅದರ ಅರ್ಥ ಪ್ರಪಂಚವನ್ನು ಹುಡುಕಿಕೊಂಡಾಗ ನಮ್ಮ ತೀರ್ಮಾನ ಬದಲಾಗುತ್ತದೆ ಎಂದು ತಿಳಿಸಿದರು.
ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂವಿಧಾನಿಕ ಆಶಯ ಮತ್ತು ಸಮಬಾಳ್ವೆಯ ಸಾಮರಸ್ಯದ ಬದುಕಿನ ಮೌಲ್ಯಗಳನ್ನು ಯುವ ಸಮುದಾಯಗಳ ನಡುವೆ ಬಿತ್ತುವ ಉದ್ದೇಶಕ್ಕಾಗಿ ಅಕಾಡೆಮಿಯು ಚಕೋರ ವೇದಿಕೆಯನ್ನು ಹುಟ್ಟುಹಾಕಿದೆ. ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಡಿಸೆಂಬರ್ ತಿಂಗಳು ಪೂರ್ತಿ ಅವರ ವಿಚಾರಧಾರೆಗಳನ್ನು ಯುವಸಮುದಾಯಕ್ಕೆ ತಲುಪಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿ ನಾಯಕ ಶ್ರೀಪಾದ ಉಪಸ್ಥಿತರಿದ್ದರು. ಉಪನ್ಯಾಸಕಿ ಶೈಲಶ್ರೀ ಸದಾನಂದ ಸ್ವಾಗತಿಸಿದರು. ಚಕೋರ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಸಮೀಕ್ಷಾ, ಸಂಜನಾ, ಅಕ್ಷತಾ, ಡಾಫ್ನಿ ನಾಡಗೀತೆಯನ್ನು ಹಾಡಿದರು. ಜಿಲ್ಲಾ ಸಂಚಾಲಕ ರಾಮಾಂಜಿ ವಂದಿಸಿದರು.