ಪೆರ್ಡೂರಿನಲ್ಲಿ ಹಿರಿಯೆರೊಟ್ಟುಗೊಂಜಿ ದಿನ’ ಕಾರ್ಯಕ್ರಮ
ಪೆರ್ಡೂರು, ಜ.2: ಪೆರ್ಡೂರು ಶ್ರೀಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮವನ್ನು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖಂಡ, ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ಸೂಡ, ಇಂದು ಹಲವಾರು ಮುಂದುವರಿದ ಕುಟುಂಬಗಳಲ್ಲಿ ವೃದ್ಧಾಪ್ಯ ಎನ್ನುವುದು ಶಾಪವಾಗಿ ಪರಿಣಮಿಸಿದೆ. ಒಂದು ರೀತಿಯಲ್ಲಿ ನೀರಸ ಜೀವನವಾಗಿ ಹೆಚ್ಚಿನವರು ಮನರಂಜನೆಯಿಂದ ವಂಚಿತರಾಗಿದ್ದಾರೆ. ಅಂತಹ ಹಿರಿಯರಿಗೆ ಜೀವನತ್ಸಾಹ ತುಂಬಲು ಇಂತಹ ಕಾರ್ಯಕ್ರಮಗಳು ಅತೀ ಅಗತ್ಯವಾಗಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 60ರಿಂದ 96 ವರ್ಷಗಳ ವರೆಗಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಸಂಭ್ರಮಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಮಾತನಾಡಿ, ದೇವರ ನಂತರದ ಸ್ಥಾನ ಹೆತ್ತವರದು. ಅವರಿಗೂ ವೃದ್ಧಾಪ್ಯದಲ್ಲಿ ಮಕ್ಕಳಂತೆಯೇ ಪ್ರೀತಿ, ಕಾಳಜಿ ತೋರಿಸಬೇಕು. ತಮ್ಮ ಯೌವನದಿಂದ ವೃದ್ಧಾಪ್ಯಾದ ವರೆಗೂ ಜೀವನವಿಡೀ ಕುಟುಂಬದ ಸುಖ ಸಂತೋಷಕ್ಕಾಗಿ ನಿಸ್ವಾರ್ಥದಿಂದ ದುಡಿದು ಬಾಳಿನ ಮುಸ್ಸಂಜೆಯಲ್ಲಿ ನಿಸ್ತೇಜರಾಗಿ ಬದುಕುವಂತಹ ಪರಿಸ್ಥಿತಿ ಇಂದಿನ ಹೆಚ್ಚಿನ ಮನೆಗಳ ಹಿರಿಯರದ್ದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಟಿ ವೈದ್ಯರಾದ ರಾಧಾ ಶೆಟ್ಟಿ ಹೊಳಿಂಜೆ ಹಾಗೂ ಸುಂದರಿ ಆಚಾರ್ಯ ಬುಕ್ಕಿಗುಡ್ಡೆ ಅವರನ್ನು ಸಮ್ಮಾನಿಸಲಾಯಿತು. ವಾಗ್ಮಿ ನಿತ್ಯಾನಂದ ಭಟ್ ಉಡುಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ತೀರ್ಥಹಳ್ಳಿಯ ಖ್ಯಾತ ಗಾಯಕ ರಮೇಶ್ ಹುಣಸೆಮಕ್ಕಿ ರಂಜಿಸಿದರು. ಮಲ್ಪೆಯ ಲೀಲಾವತಿ ಕುಟುಂಬ ಜಲ ಸಂರಕ್ಷಣೆಯ ಬಗ್ಗೆ ಛದ್ಮ ವೇಷ ದೊಂದಿಗೆ ಜನಜಾಗೃತಿ ಮೂಡಿಸಿದರು.
ಸಮಿತಿಯ ಗೌರವಾಧ್ಯಕ್ಷ ಕೆ.ಶಾಂತಾರಾಮ ಸೂಡ, ಕಾರ್ಯದರ್ಶಿ ರವೀಂದ್ರ ನಾಡಿಗ್, ಜತೆ ಕಾರ್ಯದರ್ಶಿ ಸತೀಶ್ ಕುಲಾಲ್ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿ ವಂದಿಸಿದರು.