×
Ad

ಹಿಂದೂ ಸಂಗಮದಲ್ಲಿ ಅಂಬೇಡ್ಕರ್ ಭಾವಚಿತ್ರ ದಸಂಸ ವಿರೋಧ

Update: 2026-01-29 22:10 IST

ಕುಂದಾಪುರ, ಜ.29: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ವನ್ನು ಸಂಘಪರಿವಾರದ ವಿವಿಧ ಸಂಘಟನೆಗಳು ಆಯೋಜಿಸುವ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿರುವುದಕ್ಕೆ ಹಾಗೂ ಅವರ ಫೋಟೋ ಬಳಸುವ ರಾಜಕೀಯ ಲೆಕ್ಕಾಚಾರದ ಷಡ್ಯಂತ್ರಕ್ಕೆ ವಿರೋಧವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕುಂದಾಪುರ ತಾಲೂಕು ಸಮಿತಿಯ ಪ್ರಧಾನ ಸಂಚಾಲಕ ರಾಜು ಬೆಟ್ಟಿನಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 78ವರ್ಷಗಳು ಕಳೆದು ಹಾಗೂ ಸಂವಿಧಾನ ನಮಗೆ ನಾವೇ ಅರ್ಪಿಸಿಕೊಂಡು 77 ವರ್ಷಗಳ ಪೂರೈಸಿರುವ ಈ ಸಮಯ ದಲ್ಲಿ ಹಿಂದಿನಿಂದಲೂ ಸಂವಿಧಾನದ ಬಗ್ಗೆ ಅಸಡ್ಡೆ ಮನೋಭಾವದಿಂದ ಸಂವಿಧಾನ ಪಿತಾಮಹ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಜಾತಿ ಕಾರಣದಿಂದ ಸಂಪೂರ್ಣ ಒಪ್ಪಿಕೊಳ್ಳದ ಈ ಸಂಘಟನೆಗಳು ಮತ್ತು ಹಿಂದೂತ್ವವನ್ನು ಪ್ರತಿಪಾದಿಸುವ ರಾಜಕೀಯ ಪಕ್ಷಗಳ ನಾಯಕರು ಅಂಬೇಡ್ಕರ್ ಭಾವಚಿತ್ರವನ್ನು ತಮ್ಮ ಕಾರ್ಯಕ್ರಮದಲ್ಲಿ ಅಳವಡಿಸಿ ಕೊಂಡಿರುವುದು ಆಶ್ಚರ್ಯಕರ. ಇದು ಹಿಂದುತ್ವವಾದ ಮತ್ತು ಆರ್‌ಎಸ್‌ಎಸ್ ಸಂಘಟನೆಯ ತತ್ವದ ಅಡಿಯಲ್ಲೇ ರಾಜಕೀಯ ಆಡಳಿತ ನಡೆಸುವ ಭಾರತೀಯ ಜನತಾ ಪಕ್ಷದ ರಾಜಕೀಯ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳಲು ಮುಂದಾಗಿದ್ದಾ ರೆಂಬ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಂಬೇಡ್ಕರ್ ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ಈ ಸಂಘಟನೆಗಳು ಒಪ್ಪಿಕೊಂಡ ಉದಾಹರಣೆಗಳಿಲ್ಲ. ಹಿಂದಿನಿಂದಲೂ ಅಂಬೇಡ್ಕರರನ್ನು ವಿರೋದಿಸುತ್ತಲೇ ಬಂದವರು ಪ್ರಸ್ತುತ ಈಗಲೂ ವಿರೋಧಿಸುತ್ತಲೇ ಇರುವವ ರಿಂದ ಈ ಬದಲಾವಣೆಯ ಹಿಂದೆ ಏನೋ ಷಡ್ಯಂತ್ರ ಇರುವ ಸಂಶಯ ಮೂಡಿಸುತ್ತಿದೆ. ಅಂಬೇಡ್ಕರರನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪದಗಳಿಂದ ನಿಂದಿಸಿದಾಗಲು ಎಲ್ಲೂ ಕೂಡ ವಿರೋಧಿ ಸದ ಇವರು ಯಾವ ಕಾರಣಕ್ಕೆ ಅಂಬೇಡ್ಕರ್ ಭಾವಚಿತ್ರವನ್ನು ಬಳಸಿಕೊಂಡಿದ್ದಾರೆ ಎಂದವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News