ಪ್ರಾದೇಶಿಕ ಜ್ಞಾನ ಸಂಪತ್ತಿನ ಸಂರಕ್ಷಣೆ ಇಂದಿನ ಅಗತ್ಯ: ಪ್ರೊ.ರಬಿನಾರಾಯಣ
ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ ಉದ್ಘಾಟನೆ
ಉಡುಪಿ, ಜೂ.14: ಭಾರತವು ವೈವಿಧ್ಯಮಯ ಭಾಷೆಗಳ ನಾಡಾಗಿದ್ದು, ಪ್ರಾದೇಶಿಕ ಆಯುರ್ವೇದ ತಜ್ಞರು ಆಯಾ ಭಾಗದ ಭಾಷೆಗಳಲ್ಲೇ ಸ್ಥಳೀಯ ಸಸ್ಯಗಳ ಗುಣಗಳ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ತಾಳೆಗರಿಗಳಲ್ಲಿ ದಾಖಲಿಸಿ ದ್ದಾರೆ. ಈ ವಿಭಿನ್ನ ಪ್ರಾದೇಶಿಕ ಜ್ಞಾನ ಸಂಪತ್ತು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಭಾರತ ಸರಕಾರದ ಆಯುಷ್ ಸಚಿವಾಲಯದ ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಪ್ರೊ.ವೈದ್ಯ ರಬಿನಾರಾಯಣ ಆಚಾರ್ಯ
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವ ದೆಹಲಿ(ಸಿಎಸ್‌ಯು) ಮತ್ತು ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್, ನವ ದೆಹಲಿ(ಸಿಸಿಆರ್‌ಎಎಸ್) ಮಾರ್ಗದರ್ಶನದಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀವಾದಿ ರಾಜ ಸಂಶೋಧನ ಪ್ರತಿಷ್ಠಾನದ ವತಿಯಿಂದ ರವಿವಾರ ಉಡುಪಿ ಗೀತಾಮಂದಿರದ ಶ್ರೀಪುತ್ತಿಗೆ ನೃಸಿಂಹ ಸಭಾಭವನದಲ್ಲಿ ಆಯೋಜಿಸಲಾದ 14ದಿನಗಳ ಕಾಲ ಆಯೋಜಿಸಲಾದ ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತ ಸರಕಾರದ ಜ್ಞಾನ ಭಾರತಂ ಮಿಶನ್‌ನ ಯೋಜನೆಯ ಹಿನ್ನೆಲೆಯಲ್ಲಿ ಈಗಾಗಲೇ ದೇಶದಾದ್ಯಂತ 1 ಕೋಟಿಗೂ ಅಧಿಕ ಸಂಖ್ಯೆಯ ಹಸ್ತಪ್ರತಿಗಳನ್ನು ಸರ್ವೇ ಮಾಡಲಾಗಿದೆ. ವಿವಿಧ ಭಾಷೆಗಳಲ್ಲಿರುವ ವಿವಿಧ ವಿಷಯಗಳ ಹಸ್ತಪ್ರತಿಗಳ ಲಿಪ್ಯಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಹೈದರಬಾದ್ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪರಂಪರೆ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ.ಜಿ.ಪಿ. ಪ್ರಸಾದ್, ನಿಟ್ಟೆ ವಿಶ್ವವಿದ್ಯಾಲಯದ ಐಕೆಎಸ್ ಕೇಂದ್ರದ ನಿರ್ದೇಶಕ ಡಾ.ಸುಧೀರ್ ರಾಜ್ ಕೆ. ಮಾತನಾಡಿದರು.
ಪುತ್ತಿಗೆ ಮಠದ ಆಡಳಿತಾಧಿಕಾರಿ ಹಾಗೂ ದಿವಾನ ನಾಗರಾಜ ಆಚಾರ್ಯ, ಕೇಂದ್ರೀಯ ಆಯುರ್ವೇದೀಯ ಅನುಸಂಧಾನ ಸಂಸ್ಥಾನ, ಬೆಂಗಳೂರು ವಿಭಾಗದ ಸಹಾಯಕ ನಿರ್ದೇಶಕ ಡಾ.ಮಹೇಶ್ವರ ಟಿ., ರಾಜಸ್ಥಾನದ ಎಂಎಸ್ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆಯ ಸಂಶೋಧನಾ ಅಧಿಕಾರಿ ಡಾ.ವಿನೋದ್ ಕುಮಾರ್ ಲಾವಣಿಯಾ, ನವ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಭಾಷಾ ವಿದ್ವಾಂಸ ಡಾ.ಕೀರ್ತಿಕಾಂತ್ ಶರ್ಮಾ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಾ.ಆರ್.ಎಲ್.ನಾರಾಯಣ ಸಿಂಹ, ಡಾ.ದಿಲೀಪ್ ಕುಮಾರ್ ಕಾರ್, ಉದ್ಯಾವರದ ಎಸ್‌ಡಿಎಂ ಆಯುರ್ವೇದ ಮಹಾ ವಿದ್ಯಾಲಯದ ಉಪನ್ಯಾಸಕಿ ಡಾ.ಮಹಾಲಕ್ಷ್ಮಿ ಎಂ.ಎಸ್., ಡಾ.ದೀಕ್ಷಿತಾ ಹೆಬ್ಬಾರ್, ಡಾ.ಸುದರ್ಶನ್ ಹಾಗೂ ಪುತ್ತಿಗೆ ವಿದ್ಯಾಪೀಠದ ವಿದ್ವಾಂಸರ ಡಾ.ಸುನಿಲ್ ಆಚಾರ್ಯ, ಸುಗುಣ ಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ, ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್.ಎ.ಕೃಷ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.