×
Ad

ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ: ಫಾ.ಅನಿಲ್ ಡಿಸೋಜ

Update: 2026-06-14 19:50 IST

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಫಲಿತಾಂಶ ಮಾತ್ರ ಮುಖ್ಯವಲ್ಲ, ಬದಲಾಗಿ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಫಲಿತಾಂಶದ ಸಾಧನೆಗೆ ಸನ್ಮಾನ ಅಂತ್ಯವಲ್ಲ. ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂ.ಫಾ.ಅನಿಲ್ ಡಿಸೋಜ ಹೇಳಿದ್ದಾರೆ.

ಕಥೋಲಿಕ್ ಸಭಾ ಉದ್ಯಾವರ ಘಟಕದ ನೇತೃತ್ವದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ 15 ವಿದ್ಯಾರ್ಥಿ ಗಳನ್ನು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡುತಿದ್ದರು.

ದೇವರು ನಮ್ಮ ಮೂಲಕ ಪವಾಡಗಳನ್ನು ಮಾಡುತ್ತಾರೆ. ನಿಮ್ಮ ಸಾಧನೆಯ ಹಿಂದೆ ಹಿರಿಯರ ಶ್ರಮ ವಿಶೇಷವಾ ಗಿದೆ. ನಿಮಗೆ ಸಿಕ್ಕ ಈ ಸನ್ಮಾನ ಕೇವಲ ನಿಮಗೆ ಮಾತ್ರವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುವಂತಾಗಬೇಕು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷ ಮಾಡುತ್ತಿರುವ ಇಂತಹ ಸಂಘಟನೆಗಳು, ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ರೀತಿಯ ಪ್ರೇರಣೆ ಎಂದರು.

ವೇದಿಕೆಯಲ್ಲಿ ಸಹಾಯಕ ಧರ್ಮಗುರು ಫಾ.ಸಂತೋಷ್ ಅಲ್ಮೇಡಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮೇಲ್ವಿನ್ ನೊರೋನ್ನ, ಕಾರ್ಯದರ್ಶಿ ವಿಲ್ಫ್ರೆಡ್ ಡಿಸೋಜ, ನಿಕಟಪೂರ್ವ ಅಧ್ಯಕ್ಷೆ ಐರಿನ್ ಪಿರೇರಾ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಸ್ಟೀವನ್ ಲೂಯಿಸ್ ವಹಿಸಿದ್ದರು.

ಕಾರ್ಯದರ್ಶಿ ಉಷಾ ಲವೀನಾ ಲೋಬೊ ವಂದಿಸಿದರು. ಸಾಧಕರ ಪಟ್ಟಿಯನ್ನು ಆನಂದ್‌ರಾಜ್ ಫೆರ್ನಾಂಡಿಸ್ ವಾಚಿಸಿದರು. ಅಸ್ಟಿನ್ ಕರ್ಡೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News