×
Ad

ಸಾಹಿತ್ಯದ ಅನುವಾದದಿಂದ ಭಾಷೆಗಳ ಬೆಳವಣಿಗೆ: ಪ್ರೊ.ಎ.ವಿ.ನಾವಡ

Update: 2026-06-14 19:58 IST

ಮಂಗಳೂರು, ಜೂ.14:ಭಾಷೆಗಳ ಬೆಳವಣಿಗೆಗೆ ಅನುವಾದ ಸಾಹಿತ್ಯ ತುಂಬಾ ಮುಖ್ಯವಾಗಿದೆ. ಇತರ ಭಾಷೆಯ ಸಾಹಿತ್ಯವು ತುಳುವಿಗೆ ಮತ್ತು ಪಾಡ್ದನ ಸಹಿತ ತುಳು ಸಾಹಿತ್ಯ ಇತರ ಭಾಷೆಗಳಿಗೆ ಅನುವಾದಗೊಳ್ಳುವಂತಹ ಕೆಲಸಗಳು ನಡೆಯಬೇಕಾಗಿದೆ. ಕನಕದಾಸರ ಕಾವ್ಯ ಹಾಗೂ ಕೀರ್ತನೆಗಳು ತುಳು ಭಾಷೆಗೆ ಅನುವಾದಿಸಲ್ಪಟ್ಟಿರು ವುದು ಅತ್ಯಂತ ಮಹತ್ವದ ಹಾಗೂ ಚಾರಿತ್ರಿಕ ಕಾರ್ಯವಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಎ. ವಿ.ನಾವಡ ಅಭಿಪ್ರಾಯಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ನಗರದ ತುಳು ಭವನದಲ್ಲಿ ಆಯೋಜಿಸಿದ ತುಳು ಭಾಷೆಗೆ ಅನುವಾದಿ ಸಲಾದ ಕನಕದಾಸರ ಸಮಗ್ರ ಸಾಹಿತ್ಯ ಕೃತಿಗಳ ಸಂವಾದ ಹಾಗೂ ಕಾವ್ಯ ವಾಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರದ ಸಂತ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಪ್ರೊ.ಎ.ವಿ.ನಾವಡ ಸಂಪಾದ ಕತ್ವದಲ್ಲಿ ನಾನಾ ಸಾಹಿತಿಗಳ ಸಹಕಾರದಲ್ಲಿ ತುಳುವಿಗೆ ಅನುವಾದಿಸಲಾದ ಕನಕದಾಸರ ಕಾವ್ಯ ಮೋಹನ ತರಂ ಗಿಣಿ, ಹರಿಭಕ್ತಿ ಸಾರ, ರಾಮಧಾನ್ಯ ಚರಿತೆ, ನಳಚರಿತ್ರೆ ಹಾಗೂ ಕೀರ್ತನೆಗಳ ಬಗ್ಗೆ ಅವಲೋಕನ ನಡೆಸಲಾಯಿತು.

ತುಳು-ಕನ್ನಡ ವಿದ್ವಾಂಸ ಪ್ರೊ. ಶಿವರಾಮ ಶೆಟ್ಟಿ ಕೃತಿಗಳನ್ನು ಅವಲೋಕಿಸಿ ಮಾತನಾಡಿದರು. ತುಳು ಅಕಾಡ ಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಉಪನ್ಯಾಸಕರಾದ ರಘು ಇಡ್ಕಿದು, ಡಾ.ಸುಧಾರಾಣಿ ಕೃತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೃತಿಗಳ ಅನುವಾದಕ ರಾದ ಆತ್ರಾಡಿ ಅಮೃತ ಶೆಟ್ಟಿ, ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರೊ.ಟಿ.ವಿ.ಎನ್. ಖಂಡಿಗೆ, ಮುದ್ದು ಮೂಡುಬೆಳ್ಳೆ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಡಾ. ವಸಂತ ಕುಮಾರ್ ಪೆರ್ಲ, ಅಕಾಡಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಉಪಸ್ಥಿತರಿದ್ದರು.

ಅಕಾಡಮಿಯ ನಮ್ಮ ತುಳುವೆರ್ ಮಾಲಿಕೆಯಲ್ಲಿ ಪ್ರಕಟಿಸಲಾದ ರಘು ಇಡ್ಕಿದು ರಚಿಸಿದ ’ತುಳು ಕನ್ನಡೊದ ಮಾಮಲ್ಲ ಸಂಶೋಧಕೆರ್ ಪ್ರೊ.ಎ.ವಿ.ನಾವಡೆರ್’ ಕೃತಿಯನ್ನು ಪ್ರೊ.ಶಿವರಾಮ ಶೆಟ್ಟಿ ಬಿಡುಗಡೆ ಮಾಡಿದರು. ನಾದಾ ಮಣಿನಾಲ್ಕೂರು ಅವರಿಂದ ಕನಕದಾಸರ ತುಳು ಕೀರ್ತನೆ, ಕಾವ್ಯಗಳ ಗಾಯನ ಕಾರ್ಯಕ್ರಮ ನಡೆಯಿತು.

ಅಕಾಡಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಸದಸ್ಯೆ ಅಕ್ಷಯ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News