ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಭಾಗಶಃ ಪೂರ್ಣ: ಮಂಗಳೂರು-ಕುಂದಾಪುರ ಏಕಮುಖ ರಸ್ತೆ ವಾಹನ ಸಂಚಾರಕ್ಕೆ ಮುಕ್ತ
ಉಡುಪಿ, ಜೂ.14: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆ ಕಾಮಗಾರಿ ಭಾಗಶಃ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕುಂದಾಪುರ ಕಡೆಗೆ ಹೋಗುವ ಏಕಮುಖ ರಸ್ತೆಯನ್ನು ಇಂದಿನಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಅಂಬಲಪಾಡಿಯ ಮೇಲ್ಸೇತುವೆ ಕೆಳಬಾಗದ ಸರ್ವಿಸ್ ರಸ್ತೆಗಳು ಹೋಂಡಗಳಿಂದ ತುಂಬಿದ್ದು ಮತ್ತು ಜಲಾವೃತ ವಾಗಿ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತುರ್ತಾಗಿ ಮೇಲ್ಸೇತುವೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸೋಮವಾರ ಮತ್ತೊಂದು ಬದಿಯ ರಸ್ತೆಯನ್ನು ಕೂಡ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, 24ಕೋಟಿ ರೂ. ವೆಚ್ಚದ ಈ ಮೇಲ್ಸೇತ್ಸುವೆ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುತ್ತಿದೆ. ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಮಳೆಗಾಲದಲ್ಲಿ ಸಂಚಾರಕ್ಕೆ ತೀರಾ ತೊಂದರೆ ಆಗುತ್ತಿದೆ. ತುರ್ತಾಗಿ ಸರ್ವಿಸ್ ರಸ್ತೆಯ ವಾಹನ ದಟ್ಟನೆಯನ್ನು ಕಡಿಮೆಗೊಳಿಸಲು ಮೇಲ್ಸೇತುವೆಯ ಸಣ್ಣಪುಟ್ಟ ಕಾಮಗಾರಿಯನ್ನು ಬಾಕಿ ಇದ್ದರೂ, ಅದನ್ನು ಬದಿಗಿಟ್ಟು, ತುರ್ತಾಗಿ ಮೇಲ್ಸೇತುವೆಯ ಒಂದು ಬದಿಯ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಮೇಲ್ಸೇತುವೆಯಲ್ಲಿ ಸಂಚಾರ ಮುಕ್ತಗೊಳಿಸಿರುವುದರಿಂದ ಸರ್ವಿಸ್ ರಸ್ತೆಗಳಲ್ಲಿ ವಾಹನಗಳ ಒತ್ತಡ ಕಡಿಮೆ ಆಗಲಿದೆ. ಸರ್ವಿಸ್ ರಸ್ತೆಯ ವಾಹನ ದಟ್ಟಣೆ ಕಡಿಮೆಯಾದ ನಂತರ ಎರಡೂ ಬದಿಯ ರಸ್ತೆಗಳ ದುರಸ್ತಿ ಕಾಮಗಾರಿ ನಡೆಸಲು ನಿರ್ದೇಶನ ನೀಡಲಾಗಿದೆ. ಅದೇ ರೀತಿ ಪ್ಲೈಓವರ್‌ನ ಅಂಡರ್ ಪಾಸ್ ಕಾಮಗಾರಿ ಕೂಡ ಮುಂದೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ನಗರಸಭೆಯ ಮಾಜಿ ಸದಸ್ಯರಾದ ಹರೀಶ್ ಶೆಟ್ಟಿ ಅಂಬಲಪಾಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಉಪಾಧ್ಯಕ್ಷರಾದ ಗಜೇಂದ್ರ ಎಸ್.ಪೇಲೆಮನೆ, ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ ಸುವರ್ಣ, ಪ್ರದೀಪ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
‘ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್ ಕಾಮಗಾರಿಯನ್ನು ತ್ವರಿತವಾಗಿ ಮಾಡಿ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಇನ್ನೊಂದು ಭಾಗದ ಕಾಮಗಾರಿ ನಡೆಸುತ್ತಿರುವಾಗ ಮಣ್ಣು ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಣ್ಣು ಕುಸಿಯದಂತೆ ತಡೆಗೋಡೆಯನ್ನು ನಿರ್ಮಿಸುವ ಕಾರ್ಯ ಮಾಡಲಾಗುತ್ತದೆ. ಒಟ್ಟಾರೆಯಾಗಿ ಈ ಕಾಮಗಾರಿ ವೇಗವಾಗಿ ನಡೆಸಲಾಗುತ್ತಿದೆ’
-ಕೋಟ ಶ್ರೀನಿವಾಸ ಪೂಜಾರಿ, ಸಂಸದರು