ಭಾಷಾ ಕಲಿಕೆ ಕಟ್ಟಿಕೊಳ್ಳುವುದು ಇಂದಿನ ಅಗತ್ಯ: ನಿಶ್ಚಿತ ಹೋಬಳಿದಾರ್

Update: 2026-07-30 20:56 IST

ಉಡುಪಿ, ಜು.30: ಬಹುಭಾಷಿಕತೆ ಮತ್ತು ಬಹು ಸಂಸ್ಕೃತಿಯೇ ಭಾರತದ ವಿಶೇಷತೆ. ಬಹುಭಾಷೆಗಳನ್ನು ಕಲಿಯುವ ಈ ಪರಿಸರದಲ್ಲಿ ಭಾಷಾ ಕಲಿಕೆಯನ್ನು ಕಟ್ಟಿಕೊಳ್ಳುವ ಅವಶ್ಯಕತೆ ಇದೆ ಎಂದು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ನಿಶ್ಚಿತ ಎಸ್. ಹೋಬಳಿದಾರ್ ಹೇಳಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಡುಪಿ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಭಾಷಾ ಕಲಿಕೆಯ ಸವಾಲುಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಷ್ಮಾ ರಾಣಿ ಮಾತ ನಾಡಿ, ಗಾಂಧಿ ಮೌಲ್ಯಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸುವ ಇಂತಹ ವೇದಿಕೆಗಳ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಭಾಷಾ ಕಲಿಕೆಯ ಸವಾಲುಗಳನ್ನು ಅರ್ಥ ಮಾಡಿಕೊಂಡು ಆ ಮೂಲಕ ನಮ್ಮ ಅಭಿವ್ಯಕ್ತಿ ಸಾಮರ್ಥ್ಯವನ್ನು ಎತ್ತರಿಸಿಕೊಳ್ಳಬೇಕು ಎಂದು ಹೇಳಿದರು.

ಅಕಾಡೆಮಿಯ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಅಕಾಡೆಮಿಯು ಜನರ ನಡುವೆ ಭಾರತ ಸಂವಿಧಾನದ ತತ್ವಗಳನ್ನು, ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಯನ್ನು ಪಸರಿಸುವ ಸಲುವಾಗಿ ಚಕೋರದಂತಹ ವೇದಿಕೆಗಳನ್ನು ಜಿಲ್ಲಾ ಮಟ್ಟದಲ್ಲಿ ಕ್ರಿಯಾಶೀಲ ವಾಗಿಟ್ಟುಕೊಂಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ತಲುಪುವ ಮೂಲಕ ಈ ವೇದಿಕೆ ಅತ್ಯಂತ ಕ್ರಿಯಾಶೀಲವಾಗಿ ಜನಮನಕ್ಕೆ ಬೇಕಾದಂತಹ ಪ್ರಜಾಸತ್ತಾತ್ಮಕ ವಿವೇಕವನ್ನು ತುಂಬುತ್ತಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಚಕೋರ ಜಿಲ್ಲಾ ಸಂಚಾಲಕರಾದ ಶಾಲಿನಿ ಯು.ಬಿ., ರಾಮಾಂಜಿ ನಮ್ಮಭೂಮಿ ಹಾಗೂ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

ಸಮಾಜಶಾಸ್ತ್ರ ಉಪನ್ಯಾಸಕ ರಮೇಶ್ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಶಬರೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News