ಕನಿಷ್ಠ ಕೂಲಿ ಜಾರಿಗೊಳಿಸಲು ಆಗ್ರಹಿಸಿ ಧರಣಿ

Update: 2026-07-30 20:57 IST

ಕುಂದಾಪುರ, ಜು.30: ರಾಜ್ಯ ಸರಕಾರ ಕಳೆದ ಮೇ ತಿಂಗಳಿನಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಶೀಘ್ರ ಕನಿಷ್ಠ ಕೂಲಿ ಜಾರಿ ಮಾಡಲು ಒತ್ತಾಯಿಸಿ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ(ಸಿಐಟಿಯು) ಕುಂದಾಪುರ ಘಟಕದ ವತಿಯಿಂದ ಗುರುವಾರ ಕುಂದಾಪುರ ಕಾರ್ಮಿಕರ ನಿರೀಕ್ಷಕರ ಕಚೇರಿ ಎದುರು ಧರಣಿ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಚಂದ್ರಶೇಖರ್, ರಾಜ್ಯ ಸರಕಾರ ಕನಿಷ್ಠ ಕೂಲಿ ಜಾರಿ ಮಾಡಲು ಯಾಕೆ ವಿಳಂಬ ಮಾಡುತ್ತಿದೆ ಎಂಬುದು ಅರ್ಥ ಆಗುತ್ತಿಲ್ಲ. ಈಗಾಗಲೇ 8 ವರ್ಷಗಳು ಕಳೆದಿವೆ. ಪ್ರಕಟ ಮಾಡಿದ್ದನ್ನು ಜಾರಿ ಮಾಡಲು ವಿಳಂಬ ಯಾಕೆ? ಹಣಕಾಸು ಇಲಾಖೆ ಒಪ್ಪಿಗೆ ಬೇಕು ಎಂದು ಸಿಎಂ ಡಿಕೆಶಿ ಹೇಳುತ್ತಿದ್ದಾರೆ. ಸರಕಾರವನ್ನು ಆಳುತ್ತಿರುವುದು ಹಣಕಾಸು ಇಲಾಖೆಯೇ? ಕಾರ್ಮಿಕರ ಬಗ್ಗೆ ಯೋಚನೆ ಮಾಡದೇ, ಮಾಲಕರ ಬಗ್ಗೆ ಸರಕಾರ ಆಲೋಚನೆ ಮಾಡುತ್ತಿದೆ. ಹಾಗಾದರೆ ಸರಕಾರವನ್ನು ನಡೆಸುತ್ತಿ ರುವುದು ಯಾರು? ದೊಡ್ಡ ದೊಡ್ಡ ಉದ್ಯಮಿಗಳು ಇದರ ಹಿಂದೆ ಇದ್ದಾರೆ. ಕಾರ್ಮಿಕರ ಶಕ್ತಿಯನ್ನು ಕಡೆಗಣಿಸಬೇಡಿ ಎಂದು ಎಚ್ಚರಿಸಿದರು.

ಸಿಐಟಿಯು ಕುಂದಾಪುರ ಘಟಕದ ಅಧ್ಯಕ್ಷ ವಿ.ನರಸಿಂಹ ಮಾತನಾಡಿ, ಕನಿಷ್ಠ ಕೂಲಿ ಜಾರಿಗೆ ವಿಳಂಬ ಮಾಡುತ್ತಿ ದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಸಂಘಟಿಸಬೇಕಾಗುತ್ತದೆ. ಕೆಲಸ ಮಾಡಿದರೂ ಬದುಕಲು ಕಷ್ಟ. ಅಂತದ್ದರಲ್ಲಿ ಕನಿಷ್ಠ ಕೂಲಿಯನ್ನಾದರೂ ಗೌರವಯುತವಾಗಿ ಜಾರಿ ಮಾಡಿ ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಮುಖಂಡರಾದ ಕೆ.ಶಂಕರ್, ಜಿ.ಡಿ.ಪಂಜು, ವಾಸು ಪೂಜಾರಿ, ಲಕ್ಷ್ಮಣ ಡಿ., ಪ್ರಕಾಶ ಕೋಣಿ, ಚಂದ್ರ ಪೂಜಾರಿ, ಗೋಪಾಲ ಮೇವಿನಕೆರೆ, ಜಿ.ಎಂ.ಶಂಕರ ಶೆಟ್ಟಿ, ವಸಂತ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಿಐಟಿಯು ಕುಂದಾಪುರ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸುರೇಂದ್ರ ಎಚ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News