ಸರ್ವ ಕಾಲಕ್ಕೂ ಸಲ್ಲುವ ಕವಿ ಕುವೆಂಪು: ಡಾ.ಶಿವಕುಮಾರ್ ಅಳಗೋಡು

Update: 2026-08-06 20:18 IST

ಉಡುಪಿ, ಆ.6: ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎಂದೇ ಕರೆಯಲ್ಪಟ್ಟ ರಸ ಋಷಿ ಕುವೆಂಪು ಅವರು ಹತ್ತು ಹಲವು ಸಂಗತಿಗಳಿಂದಾಗಿ ಇಂದಿನ ಯುಗಕ್ಕೆ ಪ್ರಸ್ತುತರೆನಿಸಿದ್ದಾರೆ. ಯುದ್ಧ, ಹಿಂಸೆ, ಭ್ರಷ್ಟ ರಾಜಕಾ ರಣದ ನಡುವೆ ನಲುಗುತ್ತಿರುವ ಜಗತ್ತಿಗೆ ಕುವೆಂಪು ಅವರು ಸಾರಿದ ವಿಶ್ವಮಾನವತೆಯ ಸಂದೇಶವು ಬಹುದೊಡ್ಡ ಪಾಠವಾಗಿದೆ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಅಳಗೋಡು ಹೇಳಿದ್ದಾರೆ.

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಹಾಗೂ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದೊಂದಿಗೆ ಉಡುಪಿ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಮಂಗಳವಾರ ನಡೆದ ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ರಾಷ್ಟ್ರ, ಸಮಾಜ, ಪ್ರಕೃತಿಯ ಕುರಿತಾದ ಅವರ ಚಿಂತನೆಗಳು ನಮಗೆಲ್ಲರಿಗೂ ಎಂದಿಗೂ ಆದರ್ಶವೆನ್ನುವುದಕ್ಕೆ ಅವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿರುವುದು ಮತ್ತು ಅವರ ಗೌರವಾರ್ಥವಾಗಿ 3600 ಎಕರೆಯಷ್ಟು ಪಶ್ಚಿಮಘಟ್ಟದ ಪರಿಸರವನ್ನು ಕಾಪಾಡಿಕೊಂಡು ಬಂದಿರುವುದೇ ಸಾಕ್ಷಿ. ಇಂಥ ಕುವೆಂಪುವರವರ ಚೇತನವು ಅವರ ಬರಹಗಳನ್ನು ಓದುವ ಮೂಲಕ ನಮ್ಮೆಲ್ಲರನ್ನೂ ಆವರಿಸಿಕೊಳ್ಳು ವಂತಾಗಲಿ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್ ವಹಿಸಿದ್ದರು. ಕುವೆಂಪು ಪ್ರತಿಷ್ಠಾನದ ಡಾ.ರಾಜಶೇಖರ್ ಸ್ವಾಗತಿಸಿದರು. ಡಾ.ಪ್ರಜ್ಞಾ ಮಾರ್ಪಳ್ಳಿ ವಂದಿಸಿದರು. ವಿದ್ಯಾರ್ಥಿ ದೇವರಾಜ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News