ಪ್ರತಿ ಕಾಲೇಜಿನಲ್ಲಿ ಡ್ರಗ್ಸ್ ವಿರೋಧಿ ಸಂಘ ಸ್ಥಾಪನೆ ಅಗತ್ಯ: ಶಾಸಕ ಕೊಡ್ಗಿ
ನಶಾ ಮುಕ್ತ ಯುವ ವಿಕಸಿತ ಭಾರತ: ಜಿಲ್ಲಾ ಮಟ್ಟದ ಸ್ಪರ್ಧೆ ಉದ್ಘಾಟನೆ
ಕುಂದಾಪುರ, ಆ.6: ಪ್ರತಿ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಂಘವನ್ನು ಆರಂಭಿಸಬೇಕಾಗಿದೆ. ಆ ಮೂಲಕ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿಯನ್ನು ಮೂಡಿಸಬೇಕು. ಶಾಲಾ-ಕಾಲೇಜುಗಳ ಮೂಲಕ ಈ ತರಹದ ಕಾರ್ಯಕ್ರಮಗಳು ನಡೆದಾಗ ಡ್ರಗ್ಸ್ ವಿರೋಧಿ ಅಭಿಯಾನ ಅರ್ಥಪೂರ್ಣ ಆಗುತ್ತದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್, ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಮಹಾವಿಷ್ಣು ಯೂತ್ ಕ್ಲಬ್, ಹರೆಗೋಡು ಸಹಯೋಗದಲ್ಲಿ ಕುಂದಾಪುರ ಭಂಡಾಕಾರ್‌ಕಾರ್ಸ್ ಕಾಲೇಜಿನಲ್ಲಿ ಬುಧವಾರ ನಶಾ ಮುಕ್ತ ಯುವ ವಿಕಸಿತ ಭಾರತ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಕೇಂದ್ರ ಸರಕಾರವು ಯುವಜನರು, ವಿದ್ಯಾರ್ಥಿಗಳು ಡ್ರಗ್ಸ್ ಜಾಲದಲ್ಲಿ ಸಿಕ್ಕಿ ಬೀಳಬಾರದು ಅನ್ನುವ ಉದ್ದೇಶದಿಂದ ದೇಶಾದ್ಯಂತ ಎಲ್ಲ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿದೆ. ಈ ಪ್ರಾಯದಲ್ಲಿ ಇಂತಹ ಜಾಲ, ದುಶ್ಚಟ ಗಳಲ್ಲಿ ಬೀಳುವುದು ಹೆಚ್ಚು. ಮಕ್ಕಳು ಓದಿನತ್ತ ಮಾತ್ರ ಗಮನಹರಿಸಬೇಕು. ದೇಶ ಒಳ್ಳೆಯ ದಿಕ್ಕಿನಲ್ಲಿ ಸಾಗಲು ಇದು ಸಹಕಾರಿ. ಅದರಿಂದ 2047ರ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ. ಮಾದಕ ವಸ್ತುಗಳ ಸೇವನೆ ನಿಮಗೆ ಮಾತ್ರವಲ್ಲ, ಕುಟುಂಬ, ಸಮಾಜಕ್ಕೆ ಮಾರಕ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ನಗರ ಠಾಣಾ ಪಿಎಸ್‌ಐ ನಂಜಾನಾಯ್ಕ್, ಪ್ರತಿಜ್ಞಾ ವಿಧಿ ಬೋಧಿಸಿ, ನಶಾ ಮುಕ್ತ ಯುವ ವಿಕಸಿತ ಭಾರತ ಕಾರ್ಯಕ್ರಮದ ಮೂಲಕ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಯುವ ಮನಸ್ಸುಗಳಿಗೆ ಸ್ಪರ್ಧೆಗಳನ್ನು ಆಯೋಜಿಸಿರುವುದು ವಿದ್ಯಾರ್ಥಿ ಗಳಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸಲು ನೆರವಾಗುತ್ತದೆ. ಮಾದಕ ವ್ಯಸನದ ವಿರುದ್ಧ ವಿಡಿಯೋ, ರೀಲ್ಸ್, ಪೋಸ್ಟರ್ ಗಳ ಮೂಲಕ ಜಾಗೃತಿ ಮೂಡಲಿ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಭೂಮಿ ಸಿ.ಡಬ್ಲೂ.ಸಿ. ಉಪ ನಿರ್ದೇಶಕ ಶಿವಾನಂದ ಶೆಟ್ಟಿ, ನಮ್ಮ ಭೂಮಿಯ ಕೃಪಾ ಎಂ.ಎನ್., ಉದ್ಯಮಿ ಕೆ.ಆರ್.ನಾಯಕ್, ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕ ಡಾ.ರಾಜೇಂದ್ರ ಕೆ., ಹರೆಗೋಡು ಮಹಾವಿಷ್ಣು ಯೂತ್ ಕ್ಲಬ್ ಗೌರವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಭಂಡಾಕಾರ್‌ಕಾರ್ಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಡಾ.ಸರೋಜ ಎಂ., ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ರಾಮಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಅನಂತರ ಕಾಲೇಜು ವಿದ್ಯಾರ್ಥಿಗಳಿಗೆ ’ಡ್ರಗ್ಸ್ ವಿರೋಧಿ ಅಭಿಯಾನ’ದ ಅಂಗವಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆ ಗಳನ್ನು ಆಯೋಜಿಸಲಾಗಿತ್ತು. ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್ ಜಿಲ್ಲಾ ಉಪನಿರ್ದೇಶಕ ಉಲ್ಲಾಸ್ ಕೆ.ಟಿ. ಪ್ರಸ್ತಾವಿಕವಾಗಿ ಮಾತನಾಡಿದರು. ಮಹಾವಿಷ್ಣು ಯೂತ್ ಕ್ಲಬ್‌ನ ನರಸಿಂಹ ಗಾಣಿಗ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ ವಂದಿಸಿದರು. ರೇಡಿಯೋ ಕುಂದಾಪ್ರದ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.