ಸರ್ವಿಸ್ ರಸ್ತೆಗಳಲ್ಲಿ ಬಸ್ ಸಂಚರಿಸುವಂತೆ ಆಗ್ರಹ
ಕುಂದಾಪುರ, ಆ.12: ಕೋಟದಿಂದ ಬಾಳೆಬೆಟ್ಟು ಹಾಗೂ ಕೋಟೇಶ್ವರ ದಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆಗಳು ನಿರ್ಮಾಣಗೊಂಡಿದ್ದರೂ ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್‌ಗಳು ಸರ್ವೀಸ್ ರಸ್ತೆಗೆ ಇಳಿಯದೆ ಹೆದ್ದಾರಿಯಲ್ಲೇ ಸಂಚರಿಸುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆರೋಪಿಸಿದ್ದಾರೆ.
ಕೋಟ- ಬಾಳೆಬೆಟ್ಟು ತನಕದ ಎರಡುವರೆ ಕಿ.ಮೀ ಉದ್ದದ ಸರ್ವೀಸ್ ರಸ್ತೆಯ ಎರಡೂ ಬದಿಯಲ್ಲಿ ಐದಾರು ಬಸ್ ನಿಲ್ದಾಣಗಳಿದ್ದರೂ ಬಸ್‌ಗಳು ಅಲ್ಲಿಗೆ ತೆರಳದೆ ಹೆದ್ದಾರಿಯಲ್ಲೇ ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರು ಬಸ್ ಹತ್ತಲು ಹೆದ್ದಾರಿಯ ಗ್ರಿಲ್‌ಗಳನ್ನು ಹಾರಿ ರಸ್ತೆ ದಾಟಬೇಕಾದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿ ಇಳಿಸುವುದರಿಂದ ಹಿಂದಿನಿಂದ ವೇಗವಾಗಿ ಬರುವ ವಾಹನಗಳಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.
ಕೋಟೇಶ್ವರದಿಂದ ಕುಂದಾಪುರದವರೆಗೂ ಇದೇ ಸಮಸ್ಯೆ ಮುಂದುವರಿ ದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಸರ್ವೀಸ್ ರಸ್ತೆಯನ್ನು ಸಾರಿಗೆ ಬಸ್‌ಗಳು ಬಳಸದೆ ಇರುವುದರಿಂದ ಅದರ ಉದ್ದೇಶವೇ ವಿಫಲವಾ ಗುತ್ತಿದೆ. ಬಸ್ ನಿಲ್ದಾಣಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಹೆದ್ದಾರಿಯಲ್ಲೇ ಬಸ್ ನಿಲ್ಲಿಸುವ ಕ್ರಮಕ್ಕೆ ಕಡಿವಾಣ ಹಾಕಬೇಕು. ಬಸ್‌ಗಳು ಸರ್ವೀಸ್ ರಸ್ತೆಯಲ್ಲೇ ಸಂಚರಿಸಿ, ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಶೋಕ ಪೂಜಾರಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.