ಇಎಸ್‌ಐ ವೇತನ ಮಿತಿಯನ್ನು 35,000ರೂ.ಗೆ ಹೆಚ್ಚಿಸಲು ಲೋಕಸಭೆಯಲ್ಲಿ ಸಂಸದ ಕೋಟ ಆಗ್ರಹ

Update: 2026-08-12 21:44 IST

ಉಡುಪಿ, ಆ.12: ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಸಿಗುವ ಇಎಸ್‌ಐ ಸೌಲಭ್ಯಕ್ಕೆ ವೇತನದ ಮಿತಿಯನ್ನು 35,000 ರೂ.ಗಳಿಗೆ ಹೆಚ್ಚಿಸುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ ಆಗ್ರಹಿಸಿದರು.

ನಿಯಮ 377ರಡಿ ಲೋಕಸಭೆಯಲ್ಲಿ ವಿಷಯ ಮಂಡಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಇಎಸ್‌ಐಗೆ ವೇತನ ಮಿತಿಯನ್ನು ಕನಿಷ್ಠ 35,000ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿದರು.

ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಇಎಸ್‌ಐ ಉತ್ತಮವಾದ ಆರೋಗ್ಯ ವಿಮೆಯಾಗಿದ್ದು, ಇಎಸ್‌ಐನಿಂದ ಅನೇಕ ಕುಟುಂಬಗಳು ಆರೋಗ್ಯ ಸೇವೆ ಪಡೆದು ನೆಮ್ಮದಿಯಿಂದಿವೆ. ಆದರೆ ಇಎಸ್‌ಐ ಯೋಜನೆಯ ಆದಾಯ ಮಿತಿ ಮಾಸಿಕ 21,000ಕ್ಕೆ ಸೀಮಿತವಾಗಿದೆ ಎಂದವರು ಹೇಳಿದರು.

ಇತ್ತೀಚಿಗೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಕನಿಷ್ಠ ವೇತನ ಹೆಚ್ಚಾದ ಹಿನ್ನೆಲೆಯಲ್ಲಿ 21,000ಕ್ಕಿಂತ ಹೆಚ್ಚು ವೇತನ ಪಡೆಯುವ ಕಾರ್ಮಿಕರು ಇಎಸ್‌ಐಯಿಂದ ವಂಚಿತರಾಗುತ್ತಿದ್ದಾರೆ. ಈ ಆರೋಗ್ಯ ವಿಮೆ ಯೋಜನೆ ನೌಕರರು ಮತ್ತು ಉದ್ಯೋಗ ನೀಡುವ ಸಂಸ್ಥೆಗಳು ಒಟ್ಟಾಗಿ ಪ್ರೀಮಿಯಂ ಪಾವತಿಸುವ ಮೂಲಕ ಒದಗುವ ಯೋಜನೆಯಾದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಯಾವುದೇ ಆರ್ಥಿಕ ಹೊರ ಬೀಳುವುದಿಲ್ಲ ಎಂದವರು ವಿವರಿಸಿದರು.

ಈ ಹಿಂದೆ ಹತ್ತು ಸಾವಿರವಿದ್ದ ಕನಿಷ್ಠ ವೇತನ ಈಗ ಸುಮಾರು 25,000 ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಇಎಸ್‌ಐ ವೇತನ ಮಿತಿಯನ್ನು ಪರಿಷ್ಕರಿಸದಿದ್ದರೆ ವೇತನದಲ್ಲಿ ಸಣ್ಣ ಏರಿಕೆಯಾದರೂ ದುಡಿದು ಬದುಕು ಅನೇಕ ಕಾರ್ಮಿಕರು ಆರೋಗ್ಯ ವಿಮೆ ರಕ್ಷಣೆಯ ವೈದ್ಯಕೀಯ ಸೇವೆಯಿಂದ ಹೊರಗುಳಿಯುತ್ತಾರೆ ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News