ನ್ಯಾ.ಸಂತೋಷ್ ಹೆಗ್ಡೆ ರಾಷ್ಟ್ರ, ಸಂವಿಧಾನ ವಿರೋಧಿ: ಸುಂದರ ಮಾಸ್ತರ್
ಸುಂದರ ಮಾಸ್ತರ್
ಉಡುಪಿ, ಎ.14: ಸುಪ್ರೀಂ ಕೊರ್ಟ್ ಮಾಜಿ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಇತ್ತೀಚೆಗೆ ನೀಡಿರುವ ಮೀಸಲಾತಿ ವಿರೋಧಿ ಹೇಳಿಕೆಯು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದತ್ತ ವಾಗಿ ನೀಡಿರುವ ಪ್ರಾತಿನಿಧ್ಯದ ಮೀಸಲಾತಿಯ ಅವಕಾಶವನ್ನು ನಿರಾಕರಿಸುವುದು ಮತ್ತು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುವುದು ರಾಷ್ಟ್ರ ವಿರೋಧಿ ಕೃತ್ಯವಾಗುತ್ತದೆ ಎಂದು ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಟೀಕಿಸಿದ್ದಾರೆ.
ತಮ್ಮ ಕುಟುಂಬ ಮತ್ತು ಸಮುದಾಯದವರು ಮೀಸಲಾತಿಯನ್ನು ಸಂಪೂರ್ಣ ಬಳಸಿಕೊಂಡು ಲಾಭ ಪಡೆದು ಈಗ ಬೇರೆಯವರಿಗೆ ಮೀಸಲಾತಿ ಬೇಡ ಎನ್ನುವುದು ಸರಿಯಲ್ಲ. ಅವರ ಇಡೀ ಬಂಟ ಸಮುದಾಯ ಪ್ರವರ್ಗ 3ಎ ಅಡಿಯಲ್ಲಿ ಮೀಸಲಾತಿ ಪಡೆದುಕೊಳ್ಳುತ್ತಿರುವುದು ಅವರಿಗೆ ಕಾಣಿಸುತ್ತಿಲ್ಲವೇ? ಬಂಟ ಸಮೂದಾಯದ ಪ್ರವರ್ಗ 3ಎ ಯಲ್ಲಿ ಶೇ.5 ಮೀಸಲಾತಿಯನ್ನು ನ್ಯಾಯಮೂರ್ತಿಗಳು ಯಾಕೆ ವಿರೋಧಿಸುತ್ತಿಲ್ಲ ಎಂದವರು ಪ್ರಶ್ನಿಸಿದರು.
ಅವಕಾಶಗಳು ಸಮಾನ ಹಂಚಿಕೆಯಾಗಲು ಅವರವರ ಜಾತಿಯ ಸಂಖ್ಯೆಗಳಿಗನುಗುಣವಾಗಿ ಒಳಮೀಸಲಾತಿ ಅಳವಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ನ್ಯಾ.ಸಂತೋಷ್ ಹೆಗ್ಡೆ ಇನ್ನಾದರೂ ತಮ್ಮ ಘನತೆಗೆ, ವಿಧ್ಯಾರ್ಹತೆಗೆ ಅನುಗುಣವಾಗಿ ವಿಶಾಲ ಮನೋಭಾವದಿಂದ ಈ ಸಮಾಜವನ್ನು ನೋಡಬೇಕು. ಅಷ್ಟಕ್ಕೂ ಮೀಸಲಾತಿ ಯಾವನೇ ಕೊಟ್ಟ ಬಿಕ್ಷೆ ಅಲ್ಲ. ಅದು ಸಂವಿಧಾನ ದತ್ತವಾಗಿ ನಮಗೆ ಸಿಕ್ಕ ಹಕ್ಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.