Karkala | ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಸ್ಥಳ ‘ಶುದ್ಧೀಕರಣ’: ಬಿಜೆಪಿ ಪರ ಸಂಘಟನೆಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ

Update: 2026-08-14 11:09 IST

ಸಾಂದರ್ಭಿಕ ಚಿತ್ರ | Photo credit : PTI

ಕಾರ್ಕಳ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಅದೇ ಸ್ಥಳದಲ್ಲಿ ಬಿಜೆಪಿ ಪರ ಸಂಘಟನೆಗಳು ಪೂಜೆ ಹಾಗೂ ಹವನ ನಡೆಸಿ ‘ಶುದ್ಧೀಕರಣ’ ಮಾಡಿರುವುದು ಖಂಡನೀಯ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖರ್ಗೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಏಕೈಕ ಕಾರಣಕ್ಕೆ ಸ್ಥಳವನ್ನು ‘ಶುದ್ಧೀಕರಣ’ ಮಾಡಿರುವುದು ಅಸ್ಪೃಶ್ಯತೆಯನ್ನು ಪೋಷಿಸುವಂತಾಗಿದೆ. ಜಾತಿ ಆಧಾರಿತ ಅಸ್ಪೃಶ್ಯತೆ ಹಾಗೂ ತಾರತಮ್ಯವನ್ನು ಸಂವಿಧಾನ ತಿರಸ್ಕರಿಸಿರುವ ಸಂದರ್ಭದಲ್ಲಿ ಇಂತಹ ಆಚರಣೆಗಳು ಅಮಾನವೀಯವಾಗಿವೆ ಎಂದು ಅವರು ಹೇಳಿದ್ದಾರೆ.

ದೇಶವು 80ನೇ ಸ್ವಾತಂತ್ರ್ಯೋತ್ಸವದತ್ತ ಸಾಗುತ್ತಿರುವಾಗಲೂ ಡಾ.ಬಿ.ಆರ್ ಅಂಬೇಡ್ಕರ್ ಅನುಭವಿಸಿದ ನೋವುಗಳನ್ನು ದಲಿತ ಸಮುದಾಯ ಅನುಭವಿಸುವಂತಾಗಿರುವುದು ಆತಂಕಕಾರಿ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಿಗೇ ಇಂತಹ ಪರಿಸ್ಥಿತಿ ಎದುರಾದರೆ, ಸಾಮಾನ್ಯ ದಲಿತರ ಸ್ಥಿತಿಗತಿ ಹೇಗಿರಬಹುದು ಎಂಬುದನ್ನು ಸಮಾಜ ಗಂಭೀರವಾಗಿ ಯೋಚಿಸಬೇಕಿದೆ ಎಂದು ಶುಭದರಾವ್ ತಿಳಿಸಿದ್ದಾರೆ.

‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂದು ಹೇಳುವ ಸಂಘಪರಿವಾರದ ಸಂಘಟನೆಗಳು ಇಂತಹ ಘಟನೆಗಳ ಮೂಲಕ ಅಸ್ಪೃಶ್ಯತೆಯನ್ನು ಮುಂದುವರಿಸುವುದು ಖಂಡನೀಯ. ಬಿಜೆಪಿ ಮತ್ತು ಅದರ ಬೆಂಬಲಿತ ಸಂಘಟನೆಗಳು ನಿಜವಾಗಿಯೂ ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯವನ್ನು ವಿರೋಧಿಸುತ್ತಿದ್ದರೆ, ಇಂತಹ ಘಟನೆಗಳನ್ನು ಬಹಿರಂಗವಾಗಿ ಖಂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿಯೂ ದಲಿತ ಸಮುದಾಯದ ಪ್ರಮುಖ ನಾಯಕ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬಿಜೆಪಿ ಹಾಗೂ ಅದರ ಬೆಂಬಲಿಗರಿಂದ ನಡೆದ ರಾಜಕೀಯ ಟೀಕೆಗಳನ್ನು ಗಮನಿಸಿದಾಗ, ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ರಾಜಕೀಯದ ಬಗ್ಗೆ ಸಮಾಜ ಪ್ರಶ್ನಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಯಾರನ್ನೂ ಕೀಳಾಗಿ ಕಾಣುವುದು ಹಾಗೂ ಜಾತಿಯ ಆಧಾರದಲ್ಲಿ ಪವಿತ್ರ–ಅಪವಿತ್ರ ಎಂಬ ಭೇದ ಸೃಷ್ಟಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಕ್ಕೆ ಶಾಶ್ವತವಾಗಿ ಅಂತ್ಯ ಹಾಡಿ, ಸಂವಿಧಾನದ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News