ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆ
ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ಆ.7ರಂದು ಕಾರ್ಕಳದ ಹೋಟೆಲ್ ಪ್ರಕಾಶ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ, ಕಾರ್ಕಳ ತಾಲೂಕಿನ ಜನರ ಸಾಹಿತ್ಯಾಸಕ್ತಿ ಹಾಗೂ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಕಾರ ಶ್ಲಾಘನೀಯವಾಗಿದೆ. ಇದುವರೆಗೆ ನಡೆದ ಎಲ್ಲ ಸಾಹಿತ್ಯ ಸಮ್ಮೇಳನಗಳು ಅಭೂತಪೂರ್ವ ಯಶಸ್ಸು ಕಂಡಿದ್ದು, ನಾಡು-ನುಡಿ ಸೇವೆಯಲ್ಲಿ ಕಸಾಪ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.
ಸಭೆಯಲ್ಲಿ ಕಸಾಪದ ಆಜೀವ ಸದಸ್ಯರ ತಾಲೂಕು ಸಮಾವೇಶ ಆಯೋಜಿಸುವುದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾಹಿತ್ಯಾಸಕ್ತರಿಗಾಗಿ ಸಾಹಿತ್ಯ ಕಮ್ಮಟ ಮತ್ತು ಕಾವ್ಯರಚನಾ ಸ್ಪರ್ಧೆ ನಡೆಸುವ ಕುರಿತು ಚರ್ಚಿಸಲಾಯಿತು. ಮುಖ್ಯವಾಗಿ, ನವೆಂಬರ್‌ನಲ್ಲಿ 24ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಾರ್ಕಳ ತಾಲೂಕಿನ ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮ್ಮೇಳನದ ಅಧ್ಯಕ್ಷರನ್ನು ಜಿಲ್ಲಾ ಸಮಿತಿಯ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಪ್ರಭಾಕರ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಉದ್ಯಮಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಕಸಾಪ ಜಿಲ್ಲಾ ಪ್ರತಿನಿಧಿ ಎಸ್. ನಿತ್ಯಾನಂದ ಪೈ, ಕಾರ್ಯಕ್ರಮ ಸಂಘಟಕ ರಘುವೀರ್ ಶೆಣೈ ಮುಂಡ್ಕೂರು, ಪದಾಧಿಕಾರಿಗಳಾದ ಸುಲೋಚನಾ, ಬಿ.ವಿ. ಶೈಲಜಾ ಹೆಗ್ಡೆ, ಡಾ. ಸುಮತಿ, ಧರಣೇಂದ್ರ ಕುಮಾರ್, ಆಶೀಶ್ ಶೆಟ್ಟಿ, ದೇವದಾಸ್ ನಾಯಕ್, ರಮೇಶ್ ಪ್ರಭು, ತಿಪ್ಪೇಸ್ವಾಮಿ ಚಳ್ಳಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು. ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ ವಂದಿಸಿದರು.