Udupi | ಪಿಐಟಿ ಎನ್ ಡಿಪಿಎಸ್ ಕಾಯ್ದೆಯಡಿ ಓರ್ವನ ಬಂಧನ
ಉಡುಪಿ, ಆ.14: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಂಬೆ ಮಿಷನ್ ಕಂಪೌಂಡ್ ನಿವಾಸಿ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಶೇಖ್(34) ಎಂಬಾತನನ್ನು ಪೊಲೀಸರು ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಾಣಿಕೆ ತಡೆ (ಪಿಐಟಿ–ಎನ್ಡಿಪಿಎಸ್)’ ಕಾಯ್ದೆಯಡಿ ಆ.13ರಂದು ಬಂಧಿಸಿದ್ದಾರೆ.
ಈತನನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧಿಸಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಮೇರೆಗೆ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಈ ಬಂಧನ ಆದೇಶ ಹೊರಡಿಸಿದ್ದಾರೆ.
ಆರೋಪಿ ವಿರುದ್ದ ಉಡುಪಿ ಜಿಲ್ಲೆಯ ಮಣಿಪಾಲ ಠಾಣೆಯಲ್ಲಿ 3 ಪ್ರಕರಣ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿ ತಲಾ 2 ಪ್ರಕರಣ ಹಾಗೂ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿ ಮಣಿಪಾಲ ಹಾಗೂ ಉಡುಪಿ ನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿ ದಾಖಲಾದ ಎಲ್ಲಾ ಐದು ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ದಾಖಲಾದ ಎರಡು ಸೇವನೆ ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಬಂಧಿತ ಆರೋಪಿಯನ್ನು ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶದಲ್ಲಿ ತಿಳಿಸಲಾಗಿದೆ.