ಮೇರಿ ಮಾತೆ ಪವಿತ್ರ ಧರ್ಮಸಭೆಯ ತಾಯಿ: ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿಸೋಜ

Update: 2026-08-15 20:16 IST

ಮಲ್ಪೆ, ಆ.15: ಮೇರಿ ಮಾತೆ ದೇವರ ವಾಕ್ಯದ ಮೇಲೆ ವಿಶ್ವಾಸವಿರಿಸಿದ ದಿಟ್ಟ ಮಹಿಳೆಯಾಗಿದ್ದು ಪವಿತ್ರ ಧರ್ಮ ಸಭೆಯಲ್ಲಿ ಆಕೆಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಲಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜ ಹೇಳಿದ್ದಾರೆ.

ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಅವರು ಶನಿವಾರ ಸಂದೇಶ ನೀಡಿದರು.

ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ ಬಳಿಕ ಹೆದರಿ ಕಂಗಾಲಾಗಿದ್ದ ಅವರ ಶಿಷ್ಯರನ್ನು ಒಗ್ಗೂಡಿಸಿ ಒಂದಾಗಿ ಇರಲು ಮೇರಿ ಮಾತೆ ಧೈರ್ಯ ತುಂಬಿದರು. ಮೇರಿ ಮಾತೆ ದೇವರ ಆದೇಶವನ್ನು ಗೌರವಯುತವಾಗಿ ಪಾಲಿಸಿ ಯೇಸುಸ್ವಾಮಿಯ ತಾಯಿಯಾದರು. ಇದರಿಂದಾಗಿ ಮೇರಿ ಮಾತೆಯನ್ನು ಪವಿತ್ರ ಧರ್ಮಸಭೆಯ ತಾಯಿ ಎಂದು ಕರೆಯಲಾಗುತ್ತದೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕೋಣ ಎಂದರು.

ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ವಲಯ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ನೂತನ ಆಧ್ಯಾತ್ಮಿಕ ನಿರ್ದೇಶಕ ವಂ|ಅನಿಲ್ ಡಿಸೋಜಾ, ಪುಣ್ಯಕ್ಷೇತ್ರದ ರೆಕ್ಟರ್ ವಂದನೀಯ ಬ್ಯಾಪ್ಟಿಸ್ಟ್ ಮಿನೇಜಸ್, ವಿವಿಧ ಚರ್ಚುಗಳ ಧರ್ಮಗುರುಗಳು, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ನವೀನ್ ಫೆರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವಾ, ಆಯೋಗಗಳ ಸಂಯೋಜಕರಾದ ಡೆನಿಸ್ ಲಸ್ರಾದೊ ಹಾಗೂ ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಹೋತ್ಸವದ ಪ್ರಯುಕ್ತ ಬೆಳಗ್ಗೆ ಹಾಗೂ ಸಂಜೆ ಕೊಂಕಣಿ ಭಾಷೆಯಲ್ಲಿ, ಮಧ್ಯಾಹ್ನ ಕನ್ನಡ ಹಾಗೂ ಸಂಜೆ ಇಂಗ್ಲೀಷ್ ಭಾಷೆಯಲ್ಲಿ ಮತ್ತು ಇತರೆ ಬಲಿಪೂಜೆಗಳನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News