ರಾಜ್ಯದಲ್ಲಿ 3.59 ಲಕ್ಷ ಪಡಿತರ ಕಾರ್ಡ್‌ಗಳ ರದ್ಧತಿ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ: ಸಚಿವ ರಿಝ್ವಾನ್ ಅರ್ಷದ್
ಉಡುಪಿ, ಆ.15: ರಾಜ್ಯದಲ್ಲಿರುವ ಪಡಿತರ ಚೀಟಿಗಳಲ್ಲಿ ಸುಮಾರು 7.59 ಲಕ್ಷ ಚೀಟಿಗಳನ್ನು ರದ್ದುಪಡಿಸುವಂತೆ ಕೇಂದ್ರ ಸರಕಾರದಿಂದ ಸೂಚನೆ ಬಂದಿದ್ದು, ಅದರಂತೆ ಈವರೆಗೆ ಸುಮಾರು ನಾಲ್ಕು ಲಕ್ಷ ಕಾರ್ಡ್‌ಗಳನ್ನು ರಾಜ್ಯದಲ್ಲಿ ರದ್ದು ಮಾಡಲಾಗಿದೆ. ಆದರೆ ಇನ್ನುಳಿದ 3.59 ಲಕ್ಷ ಕಾರ್ಡ್‌ಗಳ ರದ್ದತಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುವಂತೆ ನಿನ್ನೆ ಸೂಚನೆ ನೀಡಿದ್ದೇನೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖಾ ಸಚಿವ ರಿಝ್ವಾನ್ ಅರ್ಷದ್ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಇನ್ನುಳಿದ ಕಾರ್ಡ್‌ಗಳನ್ನು ರದ್ದುಗೊಳಿಸುವ ಮುನ್ನ ಸೂಕ್ತವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ. ಸದ್ಯಕ್ಕೆ ಯಾವುದೇ ಬಿಪಿಎಲ್ ಕಾರ್ಡ್‌ನ್ನು ರದ್ದು ಗೊಳಿಸದಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸರಕಾರದ ಮಟ್ಟದಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.
ಎಲ್ಲಾ ಪಡಿತರ ಚೀಟಿಗಳ ಮರುಕೆವೈಸಿಗೆ ಸೂಚನೆ ನೀಡಿರುವ ಕುರಿತು ಸಚಿವರನ್ನು ಪ್ರಶ್ನಿಸಿದಾಗ, ಪಡಿತರ ಚೀಟಿಗಳ ಕೆವೈಸಿ ಮಾಡಿ ಐದು ವರ್ಷ ವಾಗಿದೆ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ 2.59 ಕೋಟಿ ಪಡಿತರ ಕಾರ್ಡ್ ಗಳ ಮರುಕೆವೈಸಿ ಮಾಡುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಕಾರ್ಡ್‌ದಾರರು ಮರಣ ಹೊಂದಿದ್ದರೆ, ಬಡತನ ರೇಖೆಯಿಂದ ಮೇಲೆ ಬಂದಿದ್ದರೆ ಅಥವಾ ಕಾರ್ಡ್ ಅಗತ್ಯ ಇಲ್ಲದೆ ಇರುವವರಿದ್ದರೆ ಅವರ ಡಾಟಾ ಕೆವೈಸಿ ಮೂಲಕ ಲಭ್ಯವಾಗಲಿದೆ ಎಂದರು.
ಈ ಮಾಹಿತಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮರು ಕೆವೈಸಿ ಮಾಡಿಸಿಕೊಳ್ಳಲು ಸೆ.30ರವರೆಗೆ ಕಾಲಾವಕಾಶ ನೀಡಲಾಗಿದೆ. ಬಿಪಿಎಲ್, ಎಪಿಎಲ್, ಅನ್ನಪೂರ್ಣ ಸೇರಿದಂತೆ ಎಲ್ಲಾ ಪಡಿತರ ಚೀಟಿದಾರರು ಕೆವೈಸಿ ಮಾಡಿಸಿಕೊಳ್ಳಬೇಕು ಎಂದೂ ಸಚಿವರು ನುಡಿದರು.
ಹೊಸ ಪಡಿತರ ಕಾರ್ಡ್ ಮಾಡಲು ಅವಕಾಶದ ಕುರಿತು ಪ್ರಶ್ನಿಸಿದಾಗ, ಇದನ್ನು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ. ನಿನ್ನೆಯಷ್ಟೇ ಇಲಾಖೆಯ ಪ್ರಭಾರ ವಹಿಸಿಕೊಂಡಿದ್ದೇನೆ. ಇದರಲ್ಲಿ ಕಲಿಯಲು ತುಂಬಾ ಇದೆ. ಇನ್ನಷ್ಟು ಅರ್ಥ ಮಾಡಿಕೊಳ್ಳಲು ಇದೆ ಎಂದು ನಗುತ್ತಾ ನುಡಿದರು.
ಕರಾವಳಿ ಭಾಗದಲ್ಲಿ ಪಡಿತರದಲ್ಲಿ ಕುಚ್ಚಲಕ್ಕಿ ನೀಡಬೇಕೆಂಬ ಬೇಡಿಕೆ ಕುರಿತು ಕೇಳಿದಾಗ, ನಿಶ್ಚಿತವಾಗಿ ಈ ಬಗ್ಗೆ ಗಮನ ಹರಿಸುತ್ತೇನೆ. ಆಯಾ ಸ್ಥಳಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದೇವೆ. ಇಲ್ಲೂ ಕುಚಲಕ್ಕಿ ನೀಡಲು ಸಾಧ್ಯವೇ ಎಂಬ ಬಗ್ಗೆ ಗಮನಹರಿಸುತ್ತೇನೆ ಎಂದರು.
ಜಮೀರ್ ನಿರಾಕರಿಸಿದ್ದು ಉಸ್ತುವಾರಿ: ಸಚಿವ ಜಮೀರ್ ಅಹ್ಮದ್ ಅವರು ಧ್ವಜಾರೋಹರಣ ಮಾಡಲು ನಿರಾಕರಿಸಿದ್ದಾರೆ ಎಂಬ ಬಿಜೆಪಿ ಟೀಕೆಯ ಕುರಿತು ಪ್ರಶ್ನಿಸಿದಾಗ, ಬಿಜೆಪಿಯ ಟೀಕೆ ಬಗ್ಗೆ ನಾನು ಉತ್ತರ ಕೊಡುವುದಿಲ್ಲ. ಬಿಜೆಪಿಗೆ ಈ ವಿಚಾರದಲ್ಲಿ ನಮ್ಮನ್ನು ಟೀಕಿಸುವ ನೈತಿಕತೆಯೇ ಇಲ್ಲ. ಸ್ವಾತಂತ್ರ್ಯದ ಬಳಿಕ 52 ವರ್ಷ ನಾಗಪುರದ ಆರ್‌ಎಸ್‌ಎಸ್‌ನ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ ಮಾಡದ ಇವರು ನಮಗೆ ನೈತಿಕ ಬೋಧನೆ ಮಾಡುವ ಅಗತ್ಯ ಇಲ್ಲ ಎಂದು ಕಿಡಿಕಾರಿದರು.
ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಧ್ವಜ ಎತ್ತಿ ಹೋರಾಡಿದೆ, ಅದೇ ರಕ್ತ ನಮ್ಮ ದೇಹದಲ್ಲೂ ಹರಿಯುತ್ತಿದೆ. ಜಮೀರ್ ತನಗೆ ಉಸ್ತುವಾರಿ ಬೇಡ ಎಂದು ಹೇಳಿದ್ದಾರೆ. ಉಸ್ತುವಾರಿ ಬೇಡ ಎಂಬ ಕಾರಣಕ್ಕೆ ಧ್ವಜಾರೋಹಣದ ಜವಾಬ್ದಾರಿ ಬೇಡ, ನನಗೆ ಬೇರೆ ಜವಾಬ್ದಾರಿ ಜಾಸ್ತಿ ಇದೆ ಎಂದು ಹೇಳಿದ್ದಾರೆ ಎಂದರು.
ಮಾನ್ಯತೆ ಇಲ್ಲದವರಿಗೆ ಅನುಮತಿ ಇಲ್ಲ: ಶಾಲೆ, ಮುಜರಾಯಿ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ವಿಚಾರದಲ್ಲಿ ರಾಜ್ಯ ಸರಕಾರ ಆರೆಸ್ಸೆಸ್‌ನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪದ ಕುರಿತು ಉತ್ತರಿಸಿದ ರಿಝ್ವಾನ್, ನೊಂದಣಿಗೊಳ್ಳದ ಸಂಘಟನೆಗಳಿಗೆ ಮಾತ್ರ ಅನುಮತಿ ನಿರಾಕರಿಸಲಾಗಿದೆ. ಇದನ್ನು ಆರೆಸ್ಸೆಸ್‌ನವರು ಯಾಕೆ ತಮ್ಮ ಮೈಮೇಲೆ ಎಳೆದುಕೊಳ್ಳುತಿದ್ದಾರೋ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಹಳಷ್ಟು ಸಂಘಟನೆಗಳು ನೋಂದಣಿಯಾಗಿಲ್ಲ. ಆ ಸಂಘಟನೆಗಳು ಯಾವುದು ಅನ್ನೋದು ಗೊತ್ತಿಲ್ಲ. ನಮ್ಮ ಪಾರ್ಕ್, ಶಾಲಾ ಮೈದಾನ ಎಲ್ಲವನ್ನು ಉಪಯೋಗಿಸುತ್ತಾರೆ. ಇದು ನಮ್ಮ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತೋ ಗೊತ್ತಿಲ್ಲ. ಬಳಕೆ ಮಾಡುವವರು ಯಾರು ಅನ್ನೋದು ಸರಕಾರಕ್ಕೆ ಗೊತ್ತಿರಬೇಕು. ಹೀಗಾಗಿ ನೋಂದಣಿ ಮಾಡಿ ಕೊಂಡವರು ಉಪಯೋಗಿಸಿಕೊಂಡರೆ ಸರಿ. ಮಾನ್ಯತೆ ಪಡೆಯದ, ಅನಧಿಕೃತ ಸಂಘಟನೆಗಳು ಬರಬಾರದು ಅಷ್ಟೇ. ನಾವೆಲ್ಲೂ ಆರೆಸ್ಸೆಸ್ ಹೆಸರು ಹೇಳಿಲ್ಲ ಎಂದು ರಿಝ್ವಾನ್ ಅರ್ಷದ್ ನುಡಿದರು.