ಬಿಜೆಪಿ ಸರಕಾರ ಮಾತ್ರವಲ್ಲ ನಾಯಕತ್ವ, ಸಿದ್ಧಾಂತ ಕೂಡ ದುರ್ಬಲ: ಸಚಿವ ರಿಝ್ವಾನ್ ಅರ್ಷದ್

Update: 2026-08-15 20:10 IST

ಉಡುಪಿ, ಆ.15: ಬಿಜೆಪಿ ಸಿದ್ಧಾಂತ ಒಪ್ಪಿಕೊಳ್ಳದಿದ್ದವರನ್ನು ಗುರಿಯಾಗಿಸಿ ಟೀಕಿಸಲಾಗುತ್ತಿದೆ ಮತ್ತು ಅವಾಚ್ಯಶಬ್ದ ಗಳಿಂದ ನಿಂದಿಸಲಾಗುತ್ತಿದೆ. ಮೋದಿ ಯನ್ನು ಬೈದ ಕಾರಣಕ್ಕೆ 15 ವರ್ಷ ಬಾಲಕಿಯನ್ನು ಗುರಿ ಮಾಡಲಾಗಿದೆ. ಎಲ್ಲ ಅಧಿಕಾರ ತಮ್ಮಲ್ಲಿ ಇದ್ದರೂ ಕೂಡ ಕೇವಲ ಒಬ್ಬಳು ಬಾಲಕಿ ಬೈದಿರುವುದಕ್ಕೆ ಇಡೀ ವ್ಯವಸ್ಥೆ ಅಲುಗಾಡಿ ಹೋಗಿದೆ. ಇದಕ್ಕಿಂತ ದುರ್ಬಲ ವಾದ ಸರಕಾರ, ನಾಯಕತ್ವ, ಸಿದ್ಧಾಂತ ಪಕ್ಷವನ್ನು ನಾವು ನೋಡಿಲ್ಲ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಹೇಳಿದ್ದಾರೆ.

ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಶನಿವಾರ ಉಡುಪಿ ಎಲ್‌ಐಸಿ ಡೈಮಂಡ್ ಜುಬಿಲಿ ಹಾಲ್‌ನಲ್ಲಿ ಆಯೋಜಿಸಲಾದ 51ನೇ ವಾರ್ಷಿಕ ಯುವ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ಯುವಜನತೆ ಕೆಟ್ಟ ಪದಗಳನ್ನು ಕಲಿಯಲು ಕಾರಣ ಬಿಜೆಪಿಯ ಐಟಿ ಸೆಲ್. ಈ ಐಟಿ ಸೆಲ್ ದೇಶದಲ್ಲಿ ಸತ್ಯ ಹೇಳುತ್ತಿರುವವರನ್ನು ಟೀಕಿಸುತ್ತದೆ. ಸಿದ್ಧಾಂತದ ವಿರುದ್ಧ ಮಾತನಾಡಿದ ಮಹಿಳೆಯರು, ಅಲ್ಪ ಸಂಖ್ಯಾತರನ್ನು ನಿಂದಿಸಿ ಭಯ ಪಡಿಸುವ ಕಾರ್ಯ ಮಾಡುತ್ತಿದೆ. ಇದೀಗ ಇವರಿಂದಲೇ ಕಲಿತ ಯುವಜನತೆ ಅವರನ್ನೇ ಬೈಯುತ್ತಿದೆ ಎಂದು ಅವರು ಟೀಕಿಸಿದರು.

ನರೇಂದ್ರ ಮೋದಿ ಕೇವಲ ವಿಡಿಯೋ ಮಾಡಿ ಯುವಜನತೆಯನ್ನು ಕ್ಷಮಿಸಿದ್ದೇನೆ ಹೇಳಿದರೆ ಸಾಲದು. ಮೊದಲು ಇವರ ಐಟಿ ಸೆಲ್‌ಗಳನ್ನು ಸುಧಾರಿಸುವ ಕಾರ್ಯ ಮಾಡಬೇಕು. ಅದೇ ರೀತಿ ಮಹಿಳೆಯರಿಗೆ ಅಗೌರವ ಅವಾಚ್ಯ ಶಬ್ದಗಳಿಂದ ಬೈಯದಂತೆ ಅವರಿಗೆ ಮೋದಿ ನಿರ್ದೇಶನ ನೀಡಲಿ ಎಂದು ಸಚಿವರು ತಿಳಿಸಿದರು.

ನಾವು ಬಿಜೆಪಿಯವರ ರೀತಿ ಸಮಾಜವನ್ನು ಒಡೆದು ಛಿದ್ರ ಮಾಡಿ ಸಂಘಟನೆಯನ್ನು ಕಟ್ಟಿಲ್ಲ. ನಾವು ದೇಶ, ಸಮಾಜ ಕಟ್ಟುವ ರಾಜಕಾರಣ ಮಾಡಿದ್ದೇವೆ. ಸಮಾಜದ ಎಲ್ಲ ವರ್ಗದವರಿಗೆ ನ್ಯಾಯ, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ್ದೇವೆ. ಹಿಂದುಳಿದ ವರ್ಗದವರಿಗೆ, ಮಹಿಳೆಯರಿಗೆ, ಅಲ್ಪ ಸಂಖ್ಯಾತರಿಗೆ ಗೌರವದ ಬದುಕು ಮಾಡಿಕೊಟ್ಟಿದೆ. ದೇಶದ ಸಂಪತ್ತಿನಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಆ ಮೂಲಕ ದೇಶ ಕಟ್ಟುವ ರಾಜಕಾರಣವನ್ನು ಯುವಕರಿಗೆ ಮಾದರಿಯನ್ನಾಗಿ ಮಾಡಲಾಗಿದೆ ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಹರಿಪ್ರಸಾದ್ ರೈ, ರಮೇಶ್ ಕಾಂಚನ್, ರಾಜು ಪೂಜಾರಿ, ಇಂಟೆಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬಿಎಲ್‌ಎ-2 ಅವರನ್ನು ಸನ್ಮಾನಿಸ ಲಾಯಿತು. ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಜ್ಜನ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ 15 ತಂಡಗಳಿಂದ ಸಮೂಹ ನೃತ್ಯ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News