ಸ್ವಾತಂತ್ರ್ಯ ದಿನಾಚರಣೆ: ‘ಹಸಿರು ಹೆಜ್ಜೆ’ ಗಿಡ ನೆಡುವ ಕಾರ್ಯಕ್ರಮ
ಉಡುಪಿ, ಆ.16: ಉಡುಪಿ ಜಿಲ್ಲಾಸ್ಪತ್ರೆ, ಕರ್ನಾಟಕ ಅರಣ್ಯ ಇಲಾಖೆ, ಅರ್ಥ್ನೆಸ್ಟ್ ಇಂಡಿಯಾ, ಎಕ್‌ಸಾಥ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಹಸಿರು ಹೆಜ್ಜೆ’ ಪರಿಸರ ಸಂರಕ್ಷಣಾ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮವನ್ನು ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ಜಿಲ್ಲಾ ಸರ್ಜನ್ ಡಾ. ಅಶೋಕ್, ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ, ಹಮೀದ್ ಯೂಸುಫ್ ಮೂಳೂರ್, ನಝೀರ್ ಅಹಮ್ಮದ್, ರೋಶನ್ ರೋಡ್ರಗೀಸ್, ಅನಿಲ್, ರಂಜಿತಾ, ಪೀಟರ್ ಪ್ರತಾಪ್ ಭಾಗವಹಿಸಿ ಗಿಡ ನೆಟ್ಟರು.
ಅರ್ಥ್ಫೆಸ್ಟ್ ಇಂಡಿಯಾ ಪರವಾಗಿ ಮಾತನಾಡಿದ ಸರ್ಫುದ್ದೀನ್ ಶೇಕ್, ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯದ 25 ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಗುವುದು. ಸೆಪ್ಟೆಂಬರ್ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 10,000 ಗಿಡಗಳನ್ನು ನೆಡಲು ಅರ್ಥ್ಫೆಸ್ಟ್ ಇಂಡಿಯಾ ಹಾಗೂ ಎಕ್ಸಾತ್ ಸಂಸ್ಥೆಗಳು ಉದ್ದೇಶಿಸಿವೆ ಎಂದು ತಿಳಿಸಿದರು.