ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ

ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರದಾನ

Update: 2026-08-16 11:38 IST

ಕಾರ್ಕಳ : ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ನಮ್ಮೂರಿನ ಕೊಡುಗೆ ಇತ್ತು ಎಂಬುದು ಅತ್ಯಂತ ಹೆಮ್ಮೆ, ಅಂತತ ಧೀಮಂತ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿಯವರ ಸ್ಮರಣೆ ಮಾಡುವ ಅವಕಾಶ ನಮ್ಮೂರಿಗೆ ದೊರೆತಿರುವುದು ನಮ್ಮ ಭಾಗ್ಯ ಎಂದು ಮುಂಬೈ ಉದ್ಯಮಿ ಎಂ.ಡಿ.ಅಧಿಕಾರಿಯವರ ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಸಂಚಾಲಕರಾಗಿದ್ದ ಪಡುಪರ್ಕಳ ಹರೀಶ ಶೆಟ್ಟಿ ಅಭಿಮಾನ ವ್ಯಕ್ತಪಡಿಸಿದರು.

ಅವರು ಶನಿವಾರ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ (ರಿ) ಪಡುಕುಡೂರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ, ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ಪಡುಕುಡೂರು 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿಯವರ ಪ್ರತಿಮೆ ಪ್ರತಿಷ್ಠಾಪನೆಯ ನೆನಪಿನ ಸಂಭ್ರಮ ಮತ್ತು ಪ್ರಥಮ ವರ್ಷದ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ - 2026" ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಪೋಷಕರು, ಹಳೇವಿದ್ಯಾರ್ಥಿಗಳು ಊರವರು ಸೇರಿ ಪಡುಕುಡೂರು ಶಾಲೆಯನ್ನು ಉಳಿಸುವ ಮಹಾನ್‌ ಕಾರ್ಯವನ್ನು ನಡೆಸುತ್ತಿದ್ದಾರೆ. ಡಿಸೆಂಬರ್‌ ನಲ್ಲಿ ನಡೆಯುವ ಶತಮಾನೋತ್ಸವ ಸಂಭ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಪಡುಕುಡೂರು ಶಂಕರ ಶೆಟ್ಟಿ ಮುನಿಯಾಲು ಮಾತನಾಡಿ ಎಲ್ಲರೂ ಸೇರಿ ಶಾಲೆಗೆ ಹೊಸಕಳೆಯನ್ನು ನೀಡುತ್ತಿರುವುದು ಹೆಮ್ಮೆಯಾಗುತ್ತಿದೆ. ಎಂ.ಡಿ.ಅಧಿಕಾರಿಯವರ ಪುತ್ಥಳಿಯನ್ನು ಸ್ಥಾಪಿಸಿ ಶಾಶ್ವತವಾಗಿ ನೆನಪಿಸುವ ಕಾರ್ಯವನ್ನು ಮಾಡಿರುವುದು ಅತ್ಯಂತ ಶ್ಲಾಘನೀಯ. ಅತ್ಯಂತ ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿ ಶಿಸ್ತು, ಪ್ರಾಮಾಣಿಕತೆ ಹೆಸರಾದ ಪಡುಕುಡೂರು ಕಂಬಳಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರಥಮ ವರ್ಷದ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರದಾನ ಮಾಡಿರುವುದು ಮೆಚ್ಚುಗೆಯ ವಿಷಯ ಎಂದು ಅಭಿನಂದಿಸಿದರು.

ನಮಗೆ ದೊರೆತ ಸ್ವಾತಂತ್ರ್ಯಕ್ಕೆ ಮಹಾನಾಯಕರ ಜೊತೆಗೆ ಲಕ್ಷಾಂತರ ಜನರ ತ್ಯಾಗ ಬಲಿದಾನವಿದೆ ಎಂಬುದು ಎಲ್ಲರೂ ತಿಳಿಯಬೇಕು, ಇಂದು ಸರ್ವ ಅಭಿವೃದ್ದಿಗೂ ಆಂಗ್ಲಮಾಧ್ಯಮದ ಅವಶ್ಯಕತೆ ಇದ್ದರೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದು ಎಂ.ಡಿ.ಅಧಿಕಾರಿಯವರ ಪ್ರತಿಮೆ ಪ್ರತಿಷ್ಠಾಪನೆಯ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ ಹೇಳಿದರು.

ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮಾತನಾಡಿ ತೆರೆಮರೆಯಲ್ಲಿ ಜನಸೇವೆ ಮಾಡುವ ಅರ್ಹ ವ್ಯಕ್ತಿ ಸುಧಾಕರ ಶೆಟ್ಟಿ ಅವರಿಗೆ ಪ್ರಶಸ್ತಿ ದೊರೆತಿದೆ. ಅತೀ ಕಡಿಮೆ ಮಕ್ಕಳು ಇದ್ದ ನಮ್ಮ ಶಾಲೆಯ ಉಳಿವಿನ ಪ್ರಶ್ನೆ ಇತ್ತು. ಎಲ್ಲರ ಸತತ ಪರಿಶ್ರಮದ ಮೂಲಕ ಈಗ 101 ಮಕ್ಕಳು ಇದ್ದಾರೆ. ಶಾಲೆಯು ಶತಮಾನೋತ್ಸವ ಸಂಭ್ರಮದಲ್ಲಿದೆ. ಮುಂದೆ 150 ಮಕ್ಕಳು ಶಾಲೆಯಲ್ಲಿ ಕಲಿಯುವಂತಾಗಬೇಕು, ಸಕಲ ವ್ಯವಸ್ಥೆಯನ್ನು ಮಾಡಿದ್ದೇವೆ. ಮುಂದಿನ ವರ್ಷದಿಂದ ದಾನಿಗಳ ಸಹಕಾರದಿಂದ ಹೊಸ ಬಸ್‌ ವ್ಯವಸ್ಥೆಯನ್ನು ಮಾಡುತ್ತೇವೆ. ಶತಮಾನೋತ್ಸವ ಸಂಭ್ರಮಕ್ಕೆ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.

ಜೀವನದಲ್ಲಿ ಎಂದೂ ಮರೆಯದ ಕ್ಷಣ : ಆಗಸ್ಟ್‌ 15 ನನ್ನ ಹುಟ್ಟು ಹಬ್ಬ. ಅದೇ ದಿನ ನಮ್ಮೂರಿನಲ್ಲೇ ಪ್ರಥಮ ವರ್ಷದ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿಯನ್ನು ಜನಸಾಮಾನ್ಯನಾದ ನನಗೆ ನೀಡಿರುವುದು ಮನಸ್ಸು ತುಂಬಿ ಬಂದಿದೆ. ಜೀವನದಲ್ಲಿ ಎಂದೂ ಮರೆಯದ ಕ್ಷಣ ಎಂದು ಪಡುಕುಡೂರು ಕಂಬಳಮನೆ ಸುಧಾಕರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ಅಧ್ಯಕ್ಷ ಸಂದೀಪ್‌ ಶೆಟ್ಟಿ ಪಟೇಲರ ಮನೆ ಅವರು, ಎಂ.ಡಿ.ಅಧಿಕಾರಿ ಅವರ ಹೆಸರಿನಲ್ಲಿ ಸೇವೆ ಮಾಡಲು ಸಿಕ್ಕಿರುವ ಅವಕಾಶ ನಮ್ಮೆಲ್ಲರ ಬಾಗ್ಯ. ಪಡುಕುಡೂರಿನಲ್ಲಿ ಹುಟ್ಟಲು ಪುಣ್ಯ ಮಾಡಬೇಕು, ಅತ್ಯಂತ ಒಳ್ಳೆಯ ಮನಸ್ಸಿನವರು ನಮ್ಮೂರಿನಲ್ಲಿ ಇರುವುದರಿಂದಲೇ ಇಂತಹ ಮಹಾಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ. ಎಲ್ಲರ ಸಹಕಾರದಲ್ಲಿ ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ಮೂಲಕ ಹಲವಾರು ಸೇವೆಯನ್ನು ನಾವು ನಮ್ಮೂರಿಗೆ ಮಾಡುತ್ತೇವೆ ಎಂದ ಅವರು ಸಂಭ್ರಮವನ್ನು ಯಶಸ್ವಿಗೊಳಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗಣ್ಯರೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದು ಎಂ.ಡಿ.ಅಧಿಕಾರಿ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಾಯಿತು. ರಾಷ್ಟ್ರ ಧ್ವಜಾರೋಹಣವನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಪಟೇಲರ ಮನೆ ನೆರವೇರಿಸಿದರು.

2025-26ನೇ ಸಾಲಿನಲ್ಲಿ ಎಸ್‌ ಎಸ್‌ ಎಲ್‌ ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 16 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಡುಕುಡೂರು ಶಾಲೆಯಲ್ಲೂ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ನಡೆಯಿತು. ಮಕ್ಕಳ ಛಧ್ಮವೇಷ, ಮಹಾನಾಯಕರ ವೇಷಗಳು ಮೆರುಗು ನೀಡಿತು. ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಡುಕುಡೂರು ಶಾಲೆಯ ಮುಖ್ಯ ಶಿಕ್ಷಕ ಹರೀಶ ಪೂಜಾರಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾವಿನಕಟ್ಟೆ ಶಂಕರ ಶೆಟ್ಟಿ ಪಂಚವಟಿ ಅವರಿಗೆ ಸನ್ಮಾನ ನಡೆಯಿತು. 2 ವರ್ಷದ ಹಿಂದೆ ಎಂ.ಡಿ.ಅಧಿಕಾರಿಯವರ ಪುತ್ಥಳಿಯನ್ನು ಸ್ಥಾಪಿಸಲು ಪಟೇಲರ ಮನೆ ಜಗದೀಶ ಹೆಗ್ಡೆ ನೇತ್ರತ್ವದಲ್ಲಿ ರಚಿಸಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯನ್ನು ಬರ್ಖಾಸ್ತುಗೊಳಸಿ ದಾಖಲೆ ಮತ್ತು ನಗದನ್ನು ಮುಂದಿನ ಸೇವಾ ಚಟುವಟಿಕೆಗಳಿಗೆ ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಗೆ ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ವತಿಯಿಂದ ಕಪಾಟನ್ನು ನೀಡಲಾಯಿತು. ಪತ್ರಕರ್ತ ಸುಕುಮಾರ್‌ ಆಚಾರ್‌ ಖಜಾನೆ ಅವರನ್ನು ಪಡುಪರ್ಕಳ ಹರೀಶ ಶೆಟ್ಟಿ ಗೌರವಿಸಿ ಶುಭಹಾರೈಸಿದರು.

ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಜಗದೀಶ ಹೆಗ್ಡೆ ಪಟೇಲರಮನೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷೆ ಶಿಲ್ಪಾ ಪೂಜಾರಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ವಿದ್ಯಾರ್ಥಿ ನಾಯಕಿ ಅನನ್ಯ, ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ಹೃದಯ ಕುಮಾರ್‌ ಶೆಟ್ಟಿ, ಸಂದೇಶ ಶೆಟ್ಟಿ, ರಿತೇಶ್‌ ಶೆಟ್ಟಿ, ಚಿತ್ರಾ ಪೂಜಾರಿ, ಚೇತನ್‌ ಆಚಾರ್‌, ಶ್ರೀನಿವಾಸ ಆಚಾರ್ಯ, ಅಶೋಕ್‌ ಎಂ ಶೆಟ್ಟಿ, ಶಶಿಕಲಾ ಶೆಟ್ಟಿ, ತಾರಾವತಿ ಶೆಟ್ಟಿ, ಅಮಿತಾ ಶೆಟ್ಟಿ, ನಾರಾಯಣ ಆಚಾರ್ಯ, ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ಉಪಾಧ್ಯಕ್ಷ ಸಚಿನ್‌ ಪೂಜಾರಿ ಸೇಣರಬೆಟ್ಟು, ಪ್ರಧಾನ ಕಾರ್ಯದರ್ಶಿ ರಕ್ಷಣ್‌ ಶೆಟ್ಟಿ ಅಚೆಬೆಟ್ಟು, ಜೊತೆ ಕಾರ್ಯದರ್ಶಿ ಪ್ರಣಯ್‌ ಶೆಟ್ಟಿ ಚಿಕ್ಕಮಾರಬೆಟ್ಟು ಅವರ ಸಹಕಾರದಲ್ಲಿ ಗೌರವರ ಸಲಹೆಗಾರರು, ಸರ್ವಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.

ಶಿಕ್ಷಕಿ ಶೃತಿ, ಚೈತ್ರಾ, ಮಾವಿನಕಟ್ಟೆ ಸಂತೋಷ ಆಚಾರ್ಯ, ಸಂಜನಾ ಸನ್ಮಾನಪತ್ರ ವಾಚಿಸಿದರು. ಮುಖ್ಯ ಶಿಕ್ಷಕ ಹರೀಶ ಪೂಜಾರಿ ಸ್ವಾಗತಿಸಿ ಶಿಕ್ಷಕಿ ಭಾವನಾ ನಿರೂಪಿಸಿದರು. ಶಿಕ್ಷಕಿ ಶೃತಿ ಸಹಕರಿಸಿದರು. ಶಿಕ್ಷಕಿ ಶೋಭಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News