ಅಕ್ಕ ಕೆಫೆ ಮಹಿಳಾ ಆರ್ಥಿಕ ಸಬಲೀಕರಣದ ಯೋಜನೆ: ಸಚಿವ ರಿಝ್ವಾನ್ ಅರ್ಷದ್
ಉಡುಪಿ, ಆ.15: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಮತ್ತು ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯ ಕಲ್ಪಿಸಿ ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಆರಂಭಿಸಲಾದ ‘ಅಕ್ಕ ಕೆಫೆ’ಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಝ್ವಾನ್ ಅರ್ಷದ್ ಅವರು ಇಂದು ಬ್ರಹ್ಮಗಿರಿಯಲ್ಲಿರುವ ಅಬಕಾರಿ ಭವನದ ಬಳಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅಕ್ಕ ಕೆಫೆ ಮಹಿಳಾ ಆರ್ಥಿಕ ಸಬಲೀಕರಣದ ಒಂದು ಮಹತ್ತರ ಯೋಜನೆಯಾಗಿದ್ದು, ಇದನ್ನು ಸಂಪೂರ್ಣವಾಗಿ ಮಳೆಯರೇ ಮುನ್ನಡೆಸುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರು ಇಂದು ಉದ್ಯಮಿಗಳಾಗುವುದರ ಮೂಲಕ ಆರ್ಥಿಕ ಸ್ವಾತಂತ್ರ್ಯಕ್ಕೆ ಹೊಸ ಆಯಾಮ ದೊರೆಯು ವಂತಾಗಿದೆ. ಇದು ಮಹಿಳೆಯರ ಸ್ವಾಭಿಮಾನದ ಸಂಕೇತವೂ ಆಗಿದೆ ಎಂದರು.
ಬ್ರಹ್ಮಗಿರಿಯ ನಾಯರ್‌ಕೆರೆ ರಸ್ತೆಯ ಬಳಿ ಆರಂಭವಾಗಿರುವ ಈ ಹೊಸ ‘ಅಕ್ಕ ಕೆಫೆ’ಯನ್ನು ಮಣಿಪುರ ಗ್ರಾಮ ಪಂಚಾಯತ್‌ನ ಉಜ್ವಲ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಅತ್ಯಂತ ಉತ್ಸಾಹದಿಂದ ಮುನ್ನಡೆಸು ತ್ತಿದ್ದಾರೆ. ಈ ಕೆಫೆಗಳಲ್ಲಿ ಆರೋಗ್ಯಕರ ಹಾಗೂ ಸಾಂಪ್ರದಾಯಿಕ ಕರಾವಳಿ ಶೈಲಿಯ ಅಪ್ಪಟ ರುಚಿಕರ ಆಹಾರ ಪದಾರ್ಥಗಳು ಮತ್ತು ಲಘು ಉಪಹಾರಗಳು ಅತ್ಯಂತ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಕೇವಲ ಊಟೋಪಹಾರದ ತಾಣವಷ್ಟೇ ಅಲ್ಲದೆ, ಇದು ತಳಮಟ್ಟದ ಮಹಿಳೆಯರ ಅಡುಗೆ ಕೌಶಲ್ಯವನ್ನು ಸಮಾಜಕ್ಕೆ ಪರಿಚಯಿಸುವ ಮತ್ತು ಸ್ಥಳೀಯವಾಗಿ ತಯಾರಿಸಿದ ಪದಾರ್ಥಗಳಿಗೆ ಉತ್ತಮ ಮಾರುಕಟ್ಟೆಯನ್ನು ಕಲ್ಪಿಸುವ ಮೂಲಕ ಅವರ ಬದುಕಿಗೆ ಭದ್ರವಾದ ಬುನಾದಿಯನ್ನು ಒದಗಿಸುವ ವಿಶಿಷ್ಟ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಯೋಜನಾ ನಿರ್ದೇಶಕ ಉದಯ್ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವಿಜಯ, ಸಂಜೀವಿನಿ ಸ್ವಸಹಾಯ ಗುಂಪಿನ ಪ್ರತಿನಿಧಿಗಳು ಉಪಸ್ಥಿತರಿದ್ದರು.