ಮೂಕಾಂಬಿಕಾ ರೋಡ್-ಬೈಂದೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ: ಸಂಸದ ಬಿವೈಆರ್ ಸಂತಸ
ಬೈಂದೂರು, ಸೆ.30: ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಮೂಕಾಂಬಿಕಾ ರೋಡ್-ಬೈಂದೂರು ನಿಲ್ದಾಣದ ಮೂಲಕ ಬೆಂಗಳೂರು(ಯಶವಂತಪುರ) ವರೆಗೆ ವಿಸ್ತರಿಸಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಜನತೆ ಪರವಾಗಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರು, ಮಲೆನಾಡು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ರೈಲು ಸಂಪರ್ಕವನ್ನು ಇದು ಮತ್ತಷ್ಟು ಬಲಪಡಿಸಲಿದೆ. ಈ ಸುಧಾರಿತ ಸಂಪರ್ಕದಿಂದ ತಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೈಂದೂರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಯಾತ್ರಾ ನಕ್ಷೆಯಲ್ಲಿ ಮತ್ತಷ್ಟು ಪ್ರಮುಖ ಸ್ಥಾನ ಪಡೆಯಲಿದ್ದು, ಹೆಚ್ಚು ಸಂಪರ್ಕಿತ ಮತ್ತು ವಿಕಸಿತ ಬೈಂದೂರಿನತ್ತ ಹೊಸ ಹೆಜ್ಜೆಗೆ ಇದು ನಾಂದಿಯಾಗಲಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಬಹುದಿನಗಳ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ವಂದೇ ಭಾರತ್ ಸಂಪರ್ಕವನ್ನು ಬೈಂದೂರಿಗೆ ಕಲ್ಪಿಸಲಾಗಿದೆ. ಮಲೆನಾಡು ಮತ್ತು ಕರಾವಳಿ ಕರ್ನಾಟಕದ ಜನರಿಗೆ, ಅದರಲ್ಲೂ ವಿಶೇಷವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಇದು ಅತ್ಯಂತ ಅನುಕೂಲವಾಗಲಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಪ್ರಮುಖ ರೈಲು ನಿಲ್ದಾಣವಾಗಿರುವ ಮೂಕಾಂಬಿಕಾ ರೋಡ್- ಬೈಂದೂರಿನಲ್ಲಿ ವಂದೇ ಭಾರತ್ ನಿಲುಗಡೆ ಕಲ್ಪಿಸಿರುವುದು ಮಹತ್ವದ ಹೆಜ್ಜೆಯಾಗಿದೆ.
ಇದರಿಂದ ಭಕ್ತರು, ಪ್ರವಾಸಿಗರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರಿಗೆ ವೇಗದ ಹಾಗೂ ಅನುಕೂಲಕರ ಪ್ರಯಾಣದ ಅವಕಾಶ ದೊರೆಯಲಿದೆ. ಜೊತೆಗೆ ಈ ಭಾಗದ ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಮತ್ತಷ್ಟು ಉತ್ತೇಜನ ದೊರೆಯಲಿದೆ. ಶಿವಮೊಗ್ಗ ಸೇರಿದಂತೆ ಇಡೀ ಮಲೆನಾಡು ಭಾಗದ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸಲು ತಮ್ಮ ಪ್ರಯತ್ನಗಳು ನಿರಂತರವಾಗಿರಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.