ಕುಂದಾಪುರ, ಸೆ.30: ಆಹಾರ ಮತ್ತು ವಾತಾವರಣ ಕಲುಷಿತವಾದರೆ ಆರೋಗ್ಯದ ಸಮಸ್ಯೆ ಕಟ್ಟಿಟ್ಟಬುತ್ತಿ. ಕಳೆದೊಂದು ವರ್ಷದಲ್ಲಿ 1,188 ಮಕ್ಕಳಿಗೆ ಕ್ಯಾನ್ಸರ್ ಬಂದಿದ್ದು, ಎಲ್‌ಕೆಜಿ- ಯುಕೆಜಿ ಮಕ್ಕಳಿಗೆ ಹೃದಯಾಘಾತ ಆಗುತ್ತಿರುವುದಕ್ಕೆ ಇದೇ ಕಾರಣ. ಈಗ ಎಲ್ಲವೂ ಫಾಸ್ಟ್ ಆಗಿದ್ದು ಕಾಯಿಲೆ ಗಳು ಸಹ ಜಾಸ್ತಿಯಾಗಿದೆ. ಚಿಕ್ಕ ಮಕ್ಕಳಿಗೆ, ತಾಯಂದಿರಿಗೆ ಗುಣಮಟ್ಟದ, ಪೌಷ್ಠಿಕ ಆಹಾರ ಅಗತ್ಯವಿದ್ದು, ಅದು ತಲುಪುವಂತೆ ಮಾಡುವ ಹೊಣೆಗಾರಿಕೆ ಅಂಗನವಾಡಿ ಶಿಕ್ಷಕಿಯರದ್ದಾಗಿದೆ ಎಂದು ಕುಂದಾಪುರದ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧಿಶ ಶ್ರೀನಿವಾಸ ಕೆ.ಆರ್. ಹೇಳಿದ್ದಾರೆ.

ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅಭಿಯೋಗ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಟಿಕ ಸಪ್ತಾಹ ಮಾಸಾಚರಣೆ ಅಂಗವಾಗಿ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿಶುಗಳಿಗೆ, ಬಾಣಂತಿಯರಿಗೆ, ಗರ್ಭಿಣಿಯರಿಗೆ ಗುಣಮಟ್ಟದ ಆಹಾರ ತಲುಪಿದೆಯೇ ಎಂಬುದನ್ನು ಪರಿಶೀಲಿಸು ವುದು ಪ್ರಮುಖ ವಿಚಾರ. ನಿಮ್ಮಲ್ಲಿಗೆ ಪೂರೈಕೆಯಾಗುವ ಆಹಾರಗಳನ್ನು ಆದಷ್ಟು ಎಫ್‌ಎಸ್‌ಎಲ್‌ನಲ್ಲಿ ಪರೀಕ್ಷಿಸಿ ವಿತರಿಸಿ. ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಎಲ್ಲ ಅಂಗನವಾಡಿ ಶಿಕ್ಷಕಿಯರ ಮೇಲಿದೆ ಎಂದವರು ಹೇಳಿದರು.

ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಟಿ.ಎಲ್. ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ., ಕುಂದಾಪುರ ತಾಪಂ ಪಂಚಾಯತ್ ರಾಜ್ ಆಡಳಿತ ನಿರ್ದೇಶಕ ಸುಧಾಕರ ಶೆಟ್ಟಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಜಯಚಂದ್ರ ಶೆಟ್ಟಿ, ವಕೀಲೆ ರಮೀಜಾ ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ಮೇಲ್ವಿಚಾರಕಿ ಸವಿತಾ ಸ್ವಾಗತಿಸಿದರು. ಶಿಕ್ಷಕಿ ಉಷಾ ಕೆ. ವಂದಿಸಿದರು. ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor