ಉಡುಪಿ, ಸೆ.30: ಕರಾವಳಿ ಭಾಗದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ/ ಶಾಶ್ವತ ಪೀಠ ಸ್ಥಾಪನೆಯ ಅಧ್ಯಯನಕ್ಕಾಗಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಮೂವರು ನ್ಯಾಯ ಮೂರ್ತಿಗಳ ಸಮಿತಿಯನ್ನು ರಚಿಸಿರುವುದನ್ನು ಕರಾವಳಿ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ನ್ಯಾಯವಾದಿ ಪ್ರೇಮ್‌ಪ್ರಸಾದ್ ಶೆಟ್ಟಿ ಸ್ವಾಗತಿಸಿದ್ದಾರೆ.

ಈ ನಿರ್ಧಾರವು ನಮ್ಮ ದಶಕಗಳ ಕಾಲದ ನ್ಯಾಯ ವಿಕೇಂದ್ರೀಕರಣ ಹೋರಾಟದ ಹಾದಿಯಲ್ಲಿ ಅತ್ಯಂತ ಐತಿಹಾಸಿಕ ಮೈಲಿಗಲ್ಲಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಲಕ್ಷಾಂತರ ಸಾರ್ವಜನಿಕರು, ರೈತರು, ವ್ಯಾಪಾರಿಗಳು ಹಾಗೂ ಕಕ್ಷಿಗಾರರು ಅಪೀಲು ಮತ್ತು ಮೇಲ್ಮನವಿಗಳಿಗಾಗಿ ಬೆಂಗಳೂರಿನ ಪ್ರಧಾನ ಪೀಠಕ್ಕೆ 400-500 ಕಿಲೋ ಮೀಟರ್‌ಗೂ ಹೆಚ್ಚು ದೂರ ಪ್ರಯಾಣಿಸುವುದು ಭಾರಿ ಆರ್ಥಿಕ ಹಾಗೂ ದೈಹಿಕ ಹೊರೆಯಾಗಿತ್ತು. ಮಾನ್ಯ ಹೈಕೋರ್ಟ್ ಕೈಗೊಂಡಿರುವ ಈ ಕಾರ್ಯವಿಧಾನವು ಸಾರ್ವಜನಿಕರ ನ್ಯಾಯ ಸಮ್ಮತ ಬೇಡಿಕೆಗೆ ಸಿಕ್ಕ ಜಯವಾ ಗಿದ್ದು, ಸಾಮಾನ್ಯ ಜನರ ಮನೆ ಬಾಗಿಲಿಗೇ ನ್ಯಾಯವನ್ನು ತಲುಪಿಸುವ ದಿಕ್ಕಿನಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor