ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ದಿನಾಚರಣೆ
ಉಡುಪಿ, ಸೆ.30: ಇಲ್ಲಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ದಿನಾಚರಣೆ ಹಾಗೂ ಕಾಲೇಜಿನ ವಾರ್ಷಿಕ ಸಂಚಿಕೆ ಕಲಶ’ ಬಿಡುಗಡೆ ಸಮಾರಂಭ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಮಹಾಪೋಷಕ ಡಾ.ಜಿ.ಶಂಕರ್, ಸುಮಾರು 25 ವರ್ಷಗಳ ಹಿಂದೆ ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕಂಡ ಕನಸು, ಇಂದು 16 ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುವ ಮಟ್ಟಕ್ಕೆ ಕಾಲೇಜು ಬೆಳೆದಿದೆ. ಕಾಲೇಜಿಗೆ ಸುಸಜ್ಜಿತ ಸಭಾಭವನದ ಅಗತ್ಯವಿದ್ದು, ಅದನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳ ಅಗತ್ಯತೆಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 25ಲಕ್ಷ ರೂ. ನಿಧಿಯನ್ನು ಮೀಸಲಿಡುವುದಾಗಿ ತಿಳಿಸಿದ ಅವರು, ಗುಣಮಟ್ಟದ ಶಿಕ್ಷಣ ದೊರೆಯಲು ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರೂ ಶಿಸ್ತು ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ತಂದೆ-ತಾಯಿ ಹಾಗೂ ಸಮಾಜಕ್ಕೆ ಒಳಿತನ್ನು ಮಾಡುವ, ಸಂಸ್ಕಾರವಂತ ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು ಎಂದರು.
ಉಡುಪಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ ಪಾಲ್ ಎ.ಸುವರ್ಣ, ಉಡುಪಿ ಜಿಲ್ಲಾ ಪೋಶ್ ಸಮಿತಿಯ ಅಧ್ಯಕ್ಷೆ ವಿದ್ಯಾ ಭಟ್, ಲಯನ್ಸ್ ಕ್ಲಬ್‌ನ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಮಾತನಾಡಿ ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ವಹಿಸಿದ್ದರು.
ಪ್ರಸ್ತುತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಚುನಾಯಿತರಾದ ಪದಾಧಿಕಾರಿಗಳಿಗೆ ಚುನಾವಣಾ ಸಾಕ್ಷರತಾ ಸಮಿತಿ ಸಂಚಾಲಕ ಮಂಜುನಾಥ್ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಕಲಶ’ವನ್ನು ಬಿಡುಗಡೆ ಮಾಡಲಾಯಿತು.
ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ರಾಜೇಂದ್ರ ಕೆ. ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ ಹಾಗೂ ಸಹಾಯಕ ಪ್ರಾಧ್ಯಾಪಕಿ ಕವಿತಾ ಅತಿಥಿಗಳನ್ನು ಪರಿಚಯಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಆಶಾ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.