ಉಡುಪಿ, ಅ.3: ಪ್ರಜಾಸೇವಾ ಆಂದೋಲನ ಸಭೆ ಜನಪರ ಕಾಳಜಿ ಹೊಂದಿರುವ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಇದರ ಸದುಪ ಯೋಗ ಪಡೆದುಕೊಳ್ಳಬೇಕು. ಸರಕಾರದ ಸೇವೆ, ಸವಲತ್ತುಗಳನ್ನು ಜನಸಾಮಾನ್ಯರಿಗೆ ಸಕಾಲದಲ್ಲಿ ತಲುಪಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ.

ಬೈಂದೂರು ತಾಲೂಕು ಬಿಜೂರು ಗ್ರಾಮದ ಮುರ್ಗೋಳಿಹಕ್ಲು ನಂದಿಕೇಶ್ವರ ಸಭಾಭವನದಲ್ಲಿ, ಪ್ರಜಾಸೇವಾ ಇಲಾಖೆ ತಾಲೂಕು ಆಡಳಿತ ಬೈಂದೂರು ಇವರ ವತಿಯಿಂದ ಬೈಂದೂರು ಹೋಬಳಿಯ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಜಾಸೇವಾ ಆಂದೋಲನ ಸಭೆ ಸರಕಾರದ ಒಂದು ಉತ್ತಮ ಕಲ್ಪನೆ ಯಾಗಿದೆ. ಜನರು ಈ ಕಾರ್ಯಕ್ರಮದ ಬಗ್ಗೆ ವಿಶ್ವಾಸ ಹೊಂದುವಂತೆ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಸಭೆಗಳಲ್ಲಿ ಸ್ವೀಕೃತವಾಗುವ ಸಾರ್ವಜನಿಕರ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಆಲಿಸಿ, ಅವುಗಳಿಗೆ ಪರಿಣಾಮಕಾರಿ ಹಾಗೂ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರಿಕರು ಸರಕಾರಿ ಸೌಲಭ್ಯಗಳನ್ನು ಪಡೆಯಲು ಕಚೇರಿಗೆ ಅಲೆದಾಡುವುದನ್ನು ಕಂಡು ಅದನ್ನು ತಪ್ಪಿಸಿ, ಸರಕಾರ ಅವರ ಮನೆ ಬಾಗಿಲಿಗೆ ತೆರಳಿ, ಕಾಲಮಿತಿಯೊಳಗೆ ಅವರ ಅಹವಾಲುಗಳಿಗೆ ಗುಣಾತ್ಮಕ ಪರಿಹಾರ ಕಲ್ಪಿಸುವ ಮೂಲಕ ಸರಕಾರ ಜನರ ಸೇವೆಗೆ ಸದಾ ಸಿದ್ಧವಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿಸುವ ಉದ್ದೇಶದಿಂದ ಸರಕಾರ ಪ್ರಜಾಸೇವಾ ಆಂದೋಲನ ಸಭೆ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದರು.

ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನ ಸಭೆಗಳು ನಡೆಯುತ್ತಿದ್ದು, ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಭೆಗಳನ್ನು ಒಂದೊಂದು ತಾಲೂಕಿನಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರದಂದು ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತದೆ. ಸೇವೆಯೇ ನಮ್ಮ ಧರ್ಮ ಎಂಬ ಸೇವಾ ಮನೋಭಾವದೊಂದಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಜನರ ಸಮಸ್ಯೆಗೆ ದ್ವನಿಯಾಗಬೇಕಾಗಿದೆ ಎಂದರು.

ಬೈಂದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆ ಗಳಿಗೆ ಸಂಬಂಧಿಸಿದಂತೆ ಒಟ್ಟು 54 ಅರ್ಜಿಗಳು ಸಲ್ಲಿಕೆಯಾದವು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ನಂದಿಕೇಶ್ವರ ಯುವಕ ಸಮಾಜದ ಅಧ್ಯಕ್ಷ ಶ್ರೀನಿವಾಸ ದೇವಾಡಿಗ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಬೈಂದೂರು ಬಿಇಓ ಗಣೇಶ್ ನಾಯ್ಕ್ ಸ್ವಾಗತಿಸಿ, ಉಪ್ಪುಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಕೇಶವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ತಹಶೀಲ್ದಾರ್ ರಾಮಚಂದ್ರಪ್ಪ ವಂದಿಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor