×
Ad

ಮಲ್ಪೆ: ಫೆ.1ರಂದು ಈಶ್ವರ್ ಮಲ್ಪೆ ತಂಡದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮ

Update: 2025-01-30 21:39 IST

ಈಶ್ವರ್ ಮಲ್ಪೆ

ಉಡುಪಿ, ಜ.30: ಉಡುಪಿಯ ಖ್ಯಾತ ಮುಳುಗುತಜ್ಞ, ಆಪದ್ಬಾಂಧವ ಎಂದೇ ಖ್ಯಾತರಾದ ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ತಮ್ಮ ಪುತ್ರ ನಿರಂಜನ್ ಸವಿನೆನಪಿನಲ್ಲಿ ನಡೆಸುವ ಎರಡನೇ ವರ್ಷದ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ಫೆ.1ರಂದು ಸಂಜೆ 5 ಗಂಟೆಗೆ ಮಲ್ಪೆ ಕಡಲತೀರದಲ್ಲಿ ನಡೆಯಲಿದೆ ಎಂದು ಈಶ್ವರ ಮಲ್ಪೆ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿದ್ದು, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಮತ್ಸ್ಯೋದ್ಯಮಿ ಆನಂದ ಸಿ. ಕುಂದರ್, ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ, ಕರಾವಳಿ ಕಾವಲುಪಡೆಯ ಪೊಲೀಸ್ ಅದೀಕ್ಷಕ ಮಿಥುನ್ ಎಚ್.ಎಂ., ಮಲ್ಪೆ ಠಾಣಾಕಾರಿ ರವಿ ಬಿ.ಕೆ., ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 14 ಮಂದಿ ಸಾಧಕರಿಗೆ ಸನ್ಮಾನ, ಗಂಗೊಳ್ಳಿಯ ಮುಳುಗುತಜ್ಞ ದಿನೇಶ್ ಖಾರ್ವಿ ಮತ್ತು ತಂಡಕ್ಕೆ ಗೌರವಾರ್ಪಣೆ ನಡೆಯಲಿದೆ. ಮಲ್ಪೆ ಆಸುಪಾಸಿನ 5 ಸರಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಹಾಯಧನ ವಿತರಣೆ, ಇಬ್ಬರು ಯುವಕರಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಎರಡು ಆಟೋ ರಿಕ್ಷಾಗಳ ವಿತರಣೆ ನಡೆಯಲಿದೆ.

ಅಲ್ಲದೇ ಸಮಾಜದ ಉಚಿತ ಸೇವೆಗಾಗಿ ಶವ ಶೀತಲೀಕರಣ ಘಟಕ (ಫ್ರೀಜರ್ ಬಾಕ್ಸ್) ಲೋಕಾರ್ಪಣೆ, ಅನಾರೋಗ್ಯ ಪೀಡಿತರಿಗೆ ವೀಲ್ ಚೇಯರ್ ಹಸ್ತಾಂತರ ಕೂಡಾ ನಡೆಯಲಿದೆ ಎಂದು ಈಶ್ವರ ಮಲ್ಪೆ ತಿಳಿಸಿದರು.

ಕೊನೆಯಲ್ಲಿ ಸ್ಮಾರ್ಟ್‌ಗೈಯ್ಸ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಕಾಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಟೀಂ ಈಶ್ವರ್ ಮಲ್ಪೆ ಗೌರವಾಧ್ಯಕ್ಷ ಶಿವರಾಜ್, ಸದಸ್ಯರಾದ ರಕ್ಷಿತ್ ಹಾಗೂ ಬಿಲಾಲ್ ಮಲ್ಪೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News