×
Ad

ಇಎಲ್‌ಐ ಯೋಜನೆ ಆ.1ರಿಂದ ಜಾರಿ: ಶಶಿಕಾಂತ್ ದಹಿಯಾ

Update: 2025-07-14 21:48 IST

ಉಡುಪಿ, ಜು.14: ದೇಶದಲ್ಲಿ ಉದ್ಯೋಗಾವಕಾಶ ಹಾಗೂ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಹಾಗೂ ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆ ಯಲ್ಲಿ ಕೇಂದ್ರ ಸರಕಾರ ಉತ್ಪಾದನಾ ವಲಯದ ಮೂಲಕ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ ಎಂದು ಭವಿಷ್ಯ ನಿಧಿ ಸಂಘಟನೆಯ ಉಡುಪಿ ಪ್ರಾದೇಶಿಕ ಕಚೇರಿಯ ಭವಿಷ್ಯನಿಧಿ ಆಯುಕ್ತ ಶಶಿಕಾಂತ್ ದಹಿಯಾ ತಿಳಿಸಿದ್ದಾರೆ.

ಉಡುಪಿಯ ತುಳುನಾಡು ಟವರ್ಸ್‌ನಲ್ಲಿರುವ ಪಿಎಫ್ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ಯೋಜನೆ ಇದೇ ಬರುವ ಆಗಸ್ಟ್ ತಿಂಗಳ ಮೊದಲ ದಿನದಿಂದ ದೇಶಾದ್ಯಂತ ಜಾರಿ ಗೊಳ್ಳಲಿದೆ. ಆ.1ರಿಂದ ಹೊಸದಾಗಿ ಉದ್ಯೋಗ ಪಡೆಯುವವರಿಗೆ ಎರಡು ವರ್ಷ ಗಳ (2025-27ರವರೆಗೆ) ಅವಧಿಗೆ ಹಾಗೂ ಉದ್ಯೋಗದಾತರಿಗೆ ಇನ್ನೂ ಎರಡು ಹೆಚ್ಚುವರಿ ವರ್ಷಗಳಿಗೆ ಇದು ಅನ್ವಯಿಸಲಿದೆ ಎಂದರು.

ಈ ಯೋಜನೆಯ ಪ್ರಯೋಜನಗಳು 2025ರ ಆಗಸ್ಟ್ 01 ರಿಂದ 2027 ರ ಜುಲೈ 31ರ ನಡುವೆ ಸೃಷ್ಟಿ ಯಾದ ಉದ್ಯೋಗಗಳಿಗೆ ಅನ್ವಯವಾಗುತ್ತವೆ. ಈ ಯೋಜನೆಯಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಿ ಗಳು ಒಂದು ತಿಂಗಳ ವೇತನವನ್ನು (ರೂ. 15,000ದವರೆಗೆ) ಪಡೆಯುತ್ತಾರೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಒಂದು ಅವಧಿಯಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನ ನೀಡಲಾಗುತ್ತದೆ ಎಂದು ಪರಿವರ್ತನಾಧಿಕಾರಿ ಸುನಿಲ್ ರಾವ್ ವಿವರಿಸಿದರು.

ಈ ಯೋಜನೆಯಲ್ಲಿ ಎರಡು ವಿಭಾಗಗಳಿದ್ದು, ಮೊದಲ ಭಾಗ, ಮೊದಲ ಬಾರಿ ಉದ್ಯೋಗ ಪಡೆಯುವವರ ಮೇಲೆ ಹಾಗೂ ಎರಡನೇ ಭಾಗ ಉದ್ಯೋಗದಾತರ ಮೇಲೆ ಕೇಂದ್ರೀಕೃತವಾಗಿದೆ ಎಂದರು. ಇಪಿಎಫ್‌ಒದಲ್ಲಿ ನೋಂದಾಯಿಸಿಕೊಂಡ ಮೊದಲ ಬಾರಿಗೆ ಉದ್ಯೋಗಿಗಳಿಗೆ ಎರಡು ಕಂತುಗಳಲ್ಲಿ 15,000 ರೂ.ಗಳವರೆಗೆ ಒಂದು ತಿಂಗಳ ಇಪಿಎಫ್ ವೇತನವನ್ನು ನೀಡಲಾಗುತ್ತದೆ ಎಂದರು.

ಇದರಲ್ಲಿ ತಿಂಗಳಿಗೆ 15,000ದಿಂದ 1 ಲಕ್ಷ ರೂ.ಗಳವರೆಗೆ ಸಂಬಳ ಪಡೆಯುವ ಉದ್ಯೋಗಿಗಳು ಈ ಪ್ರೋತ್ಸಾಹಧನಕ್ಕೆ ಅರ್ಹರಾಗಿರುತ್ತಾರೆ. 6 ತಿಂಗಳ ಸೇವೆಯ ನಂತರ ಮೊದಲ ಕಂತನ್ನು ಪಾವತಿಸಲಾ ಗುವುದು ಮತ್ತು 12 ತಿಂಗಳ ಸೇವೆಯ ನಂತರ ಮತ್ತು ಉದ್ಯೋಗಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ವನ್ನು ಪೂರ್ಣಗೊಳಿಸಿದ ನಂತರ ಎರಡನೇ ಕಂತನ್ನು ಪಾವತಿಸಲಾಗುವುದು. ಉಳಿತಾಯದ ಅಭ್ಯಾಸವನ್ನು ಉತ್ತೇಜಿಸಲು, ಪ್ರೋತ್ಸಾಹದ ಒಂದು ಭಾಗವನ್ನು ಠೇವಣಿ ಖಾತೆಯ ಉಳಿತಾಯ ಸಾಧನದಲ್ಲಿ ನಿಗದಿತ ಅವಧಿಗೆ ಇಡಲಾಗುತ್ತದೆ. ಮುಂದಿನ ದಿನಗಳಲ್ಲಿ ಉದ್ಯೋಗಿ ಅದನ್ನು ಹಿಂಪಡೆಯಬಹುದು ಎಂದರು.

ಉದ್ಯೋಗದಾತರಿಗೆ ಬೆಂಬಲ: ಎಲ್ಲಾ ವಲಯಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯನ್ನು ಮಾಡಲು ಉದ್ಯೋಗದಾತರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಲ್ಲಿ ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಒಂದು ಲಕ್ಷ ರೂ.ವರೆಗಿನ ವೇತನ ಪಡೆಯುವ ಉದ್ಯೋಗಿ ಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಈ ಪ್ರೋತ್ಸಾಹಧನವನ್ನು ಪಡೆಯುತ್ತಾರೆ ಎಂದು ಶಶಿಕಾಂತ ದಹಿಯಾ ತಿಳಿಸಿದರು.

ಕನಿಷ್ಠ ಆರು ತಿಂಗಳ ಕಾಲ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರಕಾರವು ಎರಡು ವರ್ಷಗಳವರೆಗೆ ತಿಂಗಳಿಗೆ ರೂ. 3000ವರೆಗೆ ಉದ್ಯೋಗದಾತರಿಗೆ ಪ್ರೋತ್ಸಾಹ ಧನ ನೀಡುತ್ತದೆ. ಉತ್ಪಾದನಾ ವಲಯಕ್ಕೆ, ಪ್ರೋತ್ಸಾಹ ಧನವನ್ನು 3 ಮತ್ತು 4ನೇ ವರ್ಷಗಳಿಗೂ ವಿಸ್ತರಿಸಲಾ ಗುವುದು ಎಂದವರು ಹೇಳಿದರು.

ಇಪಿಎಫ್‌ಒದಲ್ಲಿ ನೋಂದಾಯಿಸಲಾದ ಸಂಸ್ಥೆಗಳು, ಕನಿಷ್ಠ ಆರು ತಿಂಗಳವರೆಗೆ ನಿರಂತರ ಆಧಾರದ ಮೇಲೆ ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು (50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರಿಗೆ) ಅಥವಾ ಕನಿಷ್ಠ ಐದು ಹೆಚ್ಚುವರಿ ಉದ್ಯೋಗಿಗಳನ್ನು (50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರಿಗೆ) ನೇಮಿಸಿಕೊಳ್ಳಬೇಕಾಗುತ್ತದೆ ಎಂದವರು ವಿವರಿಸಿದರು.

ಆ.1ರ ಬಳಿಕ ನೇಮಕಗೊಳ್ಳುವ ಹೆಚ್ಚುವರಿ ಉದ್ಯೋಗಿಗಳ ಇಪಿಎಫ್ ವೇತನ ಶ್ರೇಣಿ 10,000ರೂ. ವರೆಗೆ ಇದ್ದರೆ ಉದ್ಯೋಗದಾತರು ಪ್ರತಿ ತಿಂಗಳು ಒಂದು ಸಾವಿರ ರೂ. ಹೆಚ್ಚುವರಿ ಪ್ರೋತ್ಸಾಹಧನ ಪಡೆಯುತ್ತಾರೆ. ಅದೇ 10,000ರೂ.ಗಿಂತ ಹೆಚ್ಚು ಮತ್ತು 20,000ರೂ.ವರೆಗೆ ಇದ್ದರೆ 2,000 ರೂ., 20,000ರೂ.ನಿಂದ ತಿಂಗಳಿಗೆ 1 ಲಕ್ಷ ರೂ. ಸಂಬಳದವರೆಗಿದ್ದರೆ 3,000 ರೂ. ಪ್ರೋತ್ಸಾಹಧನ ಉದ್ಯೋಗದಾತರಿಗೆ ಸಿಗುತ್ತದೆ ಎಂದರು.

ಈ ಮೂಲಕ ದೇಶದಲ್ಲಿ 3ರಿಂದ 3.5ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದರಿಂದ 25,000 ಹೆಚ್ಚುವರಿ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಶಶಿಕಾಂತ್ ತಿಳಿಸಿದರು.

ಈ ಯೋಜನೆ ಉದ್ಯೋಗಿಗಳಿಗಿಂತ ಹೆಚ್ಚಾಗಿ ಉದ್ಯೋಗದಾತರ ಪರವಾಗಿದೆ ಎಂಬುದನ್ನು ಅವರು ಒಪ್ಪಿಕೊಂಡರು. ಉತ್ಪಾದನಾ ವಲಯದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಉದ್ಯೋಗದಾತರು ಮುಂದೆ ಬರಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಭವಿಷ್ಯನಿಧಿ ಕಚೇರಿಯ ಲೆಕ್ಕಾಧಿಕಾರಿ ಗಳಾದ ರಾಜೀವ್ ಝಾ ಹಾಗೂ ಸಂತೋಷ್ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News