×
Ad

ನಿರಂಜನ 100ರ ನೆನಪಲ್ಲಿ ಕಥೆಯ ರಂಗರೂಪಕ

Update: 2024-10-19 19:33 IST

ಉಡುಪಿ: ಕೆಯ್ಯೂರು ಹೋರಾಟ ಮತ್ತು ತಮ್ಮ ಬರಹ ಎರಡನ್ನೂ ಕನ್ನಡದ ನೆನಪಿನ ‘ಚಿರಸ್ಮರಣೆ’ಯಲ್ಲಿ ಉಳಿಸಿದ ಸಮ ಸಮಾಜದ ಕನಸುಗಾರ, ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಖ್ಯಾತ ಕಾದಂಬರಿಕಾರ, ಕಥೆಗಾರ ನಿರಂಜನರೆಂದೇ ಖ್ಯಾತರಾದ ಕುಳಕುಂದ ಶಿವರಾಯರ ನೂರರ ನೆನಪಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಗಳ ಸಹಯೋಗದೊಂದಿಗೆ ‘ನಿರಂಜನ ನೂರರ ನೆನಪು ಮತ್ತು ಕಥೆಯ ರಂಗರೂಪಕ’ ಕಾರ್ಯಕ್ರಮ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುವ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ, ನಿರಂಜನರ ಸಾಹಿತ್ಯ ಮತ್ತು ಸಾಮಾಜಿಕ ಕಾಳಜಿಗಳನ್ನು ಪರಿಚಯಿಸಿ ‘ಕನ್ನಡದ ಪಾಲಿಗೆ ಅವರೊಬ್ಬ ಕೇವಲ ಕಥೆಗಾರ, ಕಾದಂಬರಿಕಾರರಷ್ಟೇ ಅಲ್ಲ. ವೈಯಕ್ತಿಕ ಬದುಕಿನ ನೋವಿನ ನಡುವೆಯೂ ಸಮಾಜದ ಬದುಕಿನ ಘನತೆಗಾಗಿ ಇಡಿಯ ಬದುಕನ್ನು ಮುಡಿಪಾಗಿಟ್ಟ ಹೋರಾಟಗಾರ, ಬರಹಗಾರ ಮತ್ತು ಜನಪರ ಪತ್ರಕರ್ತರೂ ಆಗಿದ್ದರು ಎಂದು ಬಣ್ಣಿಸಿದರು.

ಉಪನ್ಯಾಸದ ಬಳಿಕ ವಾಸುದೇವ ಗಂಗೇರ ನಿರ್ದೇಶನದಲ್ಲಿ ನಿರಂಜನರ ಸಣ್ಣಕಥೆ ‘ಧ್ವನಿ’ಯ ರಂಗರೂಪದ ಪ್ರದರ್ಶನ ನಡೆಯಿತು. ಕಥಾ ಓದಿನ ಹೊಸಬಗೆಯ ಈ ಪ್ರಯೋಗದಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸದಸ್ಯ ಕಲಾವಿದರು ಪಾತ್ರಗಳಾಗಿ ಕಥೆಯ ಮಾತುಗಳಿಗೆ ಕೊರಳಾದರು.

ಪ್ರಭಾರ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಡಾ.ಸದಾನಂದ ಬೈಂದೂರು, ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನಾಗಪ್ಪ ಗೌಡ, ಐಕ್ಯೂಎಸಿ ಸಂಚಾಲಕಿ ಮೇವಿ ಮಿರಾಂದ ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News