×
Ad

ಉಡುಪಿ ಜಿಲ್ಲೆಯಲ್ಲಿ ಶೀಘ್ರವೇ 10,000 ದರ್ಖಾಸು ಪೋಡಿಗೆ ಸೂಚನೆ: ಸಚಿವ ಕೃಷ್ಣ ಬೈರೇಗೌಡ

Update: 2025-07-30 21:32 IST

ಉಡುಪಿ, ಜು.30: ರೈತರಿಗೆ ದರ್ಖಾಸುನಲ್ಲಿ ಮಂಜೂರಾದ ಭೂಮಿಗಳ ಪೋಡಿ ಮಾಡುವ ಕಾರ್ಯವನ್ನು ಮಳೆಗಾಲ ಮುಗಿದ ಕೂಡಲೇ ಪ್ರಾರಂಭಿಸಿ, 10,000 ಜನರಿಗೆ ಶೀಘ್ರವೇ ಪೋಡಿ ಮಾಡಿಕೊಡುವಂತೆ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ.

ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ಇಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಚಿವರು ಮಣಿಪಾಲ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜಿಲ್ಲೆಯ ಕಂದಾಯ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ದರ್ಖಾಸುನಲ್ಲಿ ಕಳೆದ 20ರಿಂದ 50 ವರ್ಷಗಳಲ್ಲಿ ಮಂಜೂರಾಗಿರುವ ಜಮೀನಿಗೆ ಪೋಡಿ ಮಾಡಿ ರೈತ ರಿಗೆ ಪಹಣಿ ನೀಡುವ ಕಾರ್ಯ ನಿಗದಿತ ಪ್ರಮಾಣದಲ್ಲಿ ಆಗಿಲ್ಲ. ಕಂದಾಯ ಇಲಾಖೆಯ ಕೆಳ ಹಂತದ ಗ್ರಾಮ ಲೆಕ್ಕಾಧಿಕಾರಿಗಳು, ರೆವೆನ್ಯೂ ಇನ್‌ಸ್ಪೆಕ್ಟರ್‌ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್‌ಗಳ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಿ ಪೋಡಿ ಮಾಡುವ ಕಾರ್ಯದ ವೇಗವನ್ನು ಹೆಚ್ಚಿಸಿ ಎಂದು ಅವರು ಜಿಲ್ಲಾಧಿಕಾರಿಗೆ ಸೂಚನೆಗಳನ್ನು ನೀಡಿದರು.

ರಾಜ್ಯದಲ್ಲಿ ಪೌತಿ ಖಾತೆ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲೂ ಸಹ ಇದು ಆರಂಭವಾಗಿದ್ದು, ಪ್ರಗತಿ ತುಂಬಾ ಕುಂಠಿತವಾಗಿದೆ. ಇದರ ವೇಗವನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ 2,92,000 ಜಮೀನಿನ ಪೌತಿ ಖಾತೆ ಮಾಡಬೇಕಿದೆ ಎಂದ ಅವರು, ಮೃತರ ಹೆಸರಿನಲ್ಲಿ ಜಮೀನಿನ ಖಾತೆಗಳು ಇದ್ದಲ್ಲಿ ಸರಕಾರದ ಸೌಲಭ್ಯಗಳು ಹಾಗೂ ಸಬ್ಸಿಡಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಇವುಗಳನ್ನು ಆದ್ಯತೆಯ ಮೇಲೆ ಮಾಡಬೇಕು. ಜಿಲ್ಲಾಧಿಕಾರಿಗಳು ಇದರ ಪ್ರಗತಿ ಹೆಚ್ಚಿಸಲು ಮುಂದಾಗಬೇಕು ಎಂದರು.

ಮುಂಗಾರು ಪೂರ್ವದಲ್ಲಿ ಬೀಳುವ ಮಳೆ ಸಂದರ್ಭದಲ್ಲಿ ಸಿಡಿಲು, ಗುಡುಗಿನಿಂದ ಪ್ರತಿ ವರ್ಷ 70ಕ್ಕೂ ಹೆಚ್ಚು ಮಂದಿ ರಾಜ್ಯದಲ್ಲಿ ಸಾವಿಗೀಡಾ ಗುತ್ತಿದ್ದಾರೆ. ಮಳೆ ಹಾಗೂ ಸಿಡಿಲು ಬಡಿಯುವ ವೇಳೆ ಎಲ್ಲಿ ಆಶ್ರಯ ಪಡೆಯಬೇಕೆಂಬ ಬಗ್ಗೆ ಜನರಿಗೆ ಮಾಹಿತಿ ಕೊರತೆಯಿಂದ ಈ ರೀತಿಯ ಸಾವು -ನೋವು ಗಳುಂಟಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ಗ್ರಾಮಪಂಚಾಯತ್ ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿಗಳು ಸಕ್ರಿಯ ವಾಗಿರಬೇಕು. ಒಂದು ವರ್ಷ ಮಾಡಿ ಮತ್ತೊಂದು ವರ್ಷ ಬಿಡುವುದು ಸರಿಯಲ್ಲ. ಮಳೆಗಾಲದಲ್ಲಿ ಸಕ್ರಿಯವಾಗಿ ಅವು ಕಾರ್ಯನಿರ್ವಹಿ ಸುವಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು.

ಅತಿವೃಷ್ಟಿಯಿಂದ ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದಲ್ಲಿ ಅವರಿಗೆ ಪರಿಹಾರ ನೀಡುವ ಜೊತೆಗೆ ದೇವರಾಜ ಅರಸು ವಸತಿ ಯೋಜನೆ ಯಡಿಯಲ್ಲಿ ಮನೆಯನ್ನು ಮಂಜೂರು ಮಾಡಬೇಕು. ಈ ರೀತಿ ಮಂಜೂರು ಮಾಡುವ ಅಧಿಕಾರ ಕಂದಾಯ ಇಲಾಖೆಗೆ ಇದೆ. ಇದನ್ನು ಅನುಷ್ಠಾನ ಗೊಳಿಸಬೇಕು ಎಂದರು.

ಮಳೆಯಿಂದ ರಸ್ತೆಗಳು ಹಾಳಾಗಿವೆ. ಹೀಗಾಗಿ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳಬೇಕು. ಇವುಗಳಿಗೆ ಎನ್‌ಡಿಆರ್‌ಎಫ್ ನಿಯಮಾವಳಿಯ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು. ಗುಂಡಿ ಮುಚ್ಚುವ ಸಣ್ಣ ಪುಟ್ಟ ಕಾರ್ಯಗಳಿಗೆ ಹೆಚ್ಚು ಹೆಚ್ಚು ಅನುದಾನಬೇಕೆಂದು ಕೇಳಿದಲ್ಲಿ ಅನುಮತಿ ನೀಡುವುದು ಕಷ್ಟ. ಇವು ಎನ್‌ಡಿಆರ್‌ಎಫ್ ನಿಯಮಾವಳಿಯ ಪ್ರಕಾರ ಮಾಡಿ ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳ ಬೇಕು ಎಂದರು.

ಜಿಲ್ಲೆಯಲ್ಲಿ ಬಗರ್ ಹುಕುಂ ಅಡಿಯಲ್ಲಿ 687 ಜನರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯವಾಗಬೇಕಾ ಗಿತ್ತು. ಆದರೆ ಇದುವರೆಗೆ ಕೇವಲ 9 ಜನರಿಗೆ ಮಾತ್ರ ವಿತರಿಸಲಾಗಿದೆ. ಆಗಸ್ಟ್ 15ರ ಒಳಗೆ ಅರ್ಹತೆ ಇರುವ ಪ್ರತಿಯೊ ಬ್ಬರಿಗೂ ಹಕ್ಕುಪತ್ರ ವಿತರಿಸುವ ಕಾರ್ಯವಾಗಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವ ಬೈರೇಗೌಡ ಸೂಚನೆ ನೀಡಿದರು.

ಭೂಸುರಕ್ಷಾ ಯೋಜನೆ ಅಡಿ ಕಂದಾಯ ಇಲಾಖೆಯ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯವು ನೆರೆಯ ಜಿಲ್ಲೆಗೆ ಹೋಲಿಸಿದಲ್ಲಿ ಕಡಿಮೆ ಇದೆ. ದಾಖಲೆಗಳನ್ನು ಗಣಕೀಕರಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳ ಬೇಕು. ಇಲ್ಲಸಲ್ಲದ ಸಬುಬೂ ಹೇಳುವುದು ಸರಿಯಲ್ಲ ಎಂದವರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಗ್ರಾಮಲೆಕ್ಕಿಗರಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದೆ. ಗ್ರಾಮ ಲೆಕ್ಕಿಗರು ತಮ್ಮ ಪ್ರತಿಯೊಂದು ಕಾರ್ಯಗಳನ್ನು ಈಗಿನಿಂದಲೇ ಇ-ಆಫೀಸ್ ಮೂಲಕ ಮಾಡಬೇಕು ಎಂದು ಅವರು ಸ್ಪಷ್ಟ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಡಿಎಫ್‌ಓ ಗಣಪತಿ, ಕುದುರೆಮುಖ ವೈಲ್ಡ್‌ ಲೈಫ್ ಡಿಎಫ್‌ಓ ಶಿವರಾಮ್ ಎಂ ಬಾಬು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News