×
Ad

ಕುಂದಾಪುರ: ಶಕ್ತಿ ಯೋಜನೆಯಡಿ 1.10ಕೋಟಿ ಮಹಿಳೆಯರ ಪ್ರಯಾಣ

Update: 2025-01-29 21:31 IST

ಉಡುಪಿ, ಜ.29: ಕುಂದಾಪುರದ ಡಿಪೋದಿಂದ ಒಟ್ಟು 76 ಸರಕಾರಿ ಬಸ್ಸುಗಳು ಬೇರೆ ಬೇರೆ ಮಾರ್ಗದಲ್ಲಿ ಕಾರ್ಯಾ ಚರಿಸುತ್ತಿದೆ. ಶಕ್ತಿ ಯೋಜನೆ ಯಡಿ ಈವರೆಗೆ ಸುಮಾರು 1.10 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 38.30 ಕೋಟಿ ಆದಾಯ ಬಂದಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಉದಯ ಶೆಟ್ಟಿ ತಿಳಿಸಿದ್ದಾರೆ.

ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ಪುರಸಭೆಯ ದಿ.ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ ಖಾರ್ವಿ, ಗಂಗೊಳ್ಳಿಗೆ ಹೋಗುವ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಮಧ್ಯದಲ್ಲಿ ಇಳಿಸಲಾಗುತ್ತಿದೆ. ಬಸ್ ನಿಲ್ದಾಣದಿಂದ ಶಾಸ್ತ್ರೀ ವೃತ್ತದವರೆಗೆ ಮಹಿಳಾ ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ನಾಲ್ಕು ಪರವಾನಿಗೆ ಇದ್ದರೂ ಎರಡು ಬಸ್ಸುಗಳು ಸಂಚರಿಸುತ್ತಿವೆ. ಮಹಿಳಾ ಪ್ರಯಾಣಿಕರನ್ನು ಮಧ್ಯದಲ್ಲಿ ಇಳಿಸಿ ಹೋಗುತ್ತಿರುವ ಬಗ್ಗೆ ಬಸ್ ನಿರ್ವಾಹಕರಿಗೆ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.

ಶೌಚಾಲಯ ಅವ್ಯವಸ್ಥೆ: ಪುರಸಭೆಯಲ್ಲಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಮೂರು ಸಭೆ ನಡೆದಿದ್ದು ಸಭೆಯ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ನಿರ್ಣಯ ಗಳನ್ನು ಕಾರ್ಯಗತಗೊಳಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಬರೆಕಟ್ಟು ತೋಡು ಕುಸಿದು ಆರು ತಿಂಗಳು ಕಳೆದಿದ್ದರೂ ದುರಸ್ಥಿ ಆಗಿಲ್ಲ, ಯುಜಿಡಿ ಕಾಮಗಾರಿ ನೆಲಕಚ್ಚಿ ಹೋಗಿದೆ ಎಂದು ಸದಸ್ಯ ಗಿರೀಶ್ ಆರೋಪಿಸಿದರು.

ಕುಂದಾಪುರ ಪುರಸಭೆ ಕಾರ್ಯಾಲಯದ ಪ್ರಥಮ ಮಹಡಿಯಲ್ಲಿರುವ ಶೌಚಾಲಯ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ ಸದಸ್ಯ ಗಿರೀಶ್ ದೇವಾಡಿಗ, ಶೌಚಾಲಯದ ಒಳಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದುರಸ್ಥಿ ಮಾಡಲು ಸಾಧ್ಯವಾಗದಿದ್ದರೆ ಬೀಗ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಪುರಸಭೆ ಕಾರ್ಯಾಲಯದಲ್ಲಿನ ಶೌಚಾಲಯ ದುರಸ್ಥಿ ಬಗ್ಗೆ ಈಗಾಗಲೇ ಕ್ರಮಕೈಗೊಳ್ಳ ಲಾಗಿದೆ. ಯುಜಿಡಿ ಕಾಮಗಾರಿ ಬಗ್ಗೆ ಶಾಸಕರು ಸಭೆ ಕರೆದು ಚರ್ಚೆ ನಡೆಸಿದ್ದು, ಮುಂದಿನ ಸಭೆಯಲ್ಲಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.

ಹಕ್ಕುಪತ್ರ ನೀಡಲು ಆಗ್ರಹ: ಪುರಸಭೆ ವ್ಯಾಪ್ತಿಯ ಕೋಡಿಯಲ್ಲಿ ನಿರ್ಮಿಸಲಾಗುತ್ತಿರುವ ಖಾಸಗಿ ವಾಣಿಜ್ಯ ಕಟ್ಟಡದ ಬಗ್ಗೆ ಸದಸ್ಯ ಅಶ್ಫಕ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಲಾ ಗುತ್ತಿದ್ದು, ಪುರಸಭೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ದಾಖಲೆ ಹಾಗೂ ಮಾಹಿತಿ ನೀಡುವ ವರೆಗೆ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.

ದಲಿತ ಕುಟುಂಬಕ್ಕೆ ಹಕ್ಕುಪತ್ರ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ವೀಣಾ ಭಾಸ್ಕರ ಪ್ರಸ್ತಾಪಿಸಿ, ಆದಷ್ಟು ಶೀಘ್ರದಲ್ಲಿ ಹಕ್ಕುಪತ್ರ ನೀಡಲು ಪುರಸಭೆ ಹಾಗೂ ಕಂದಾಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಅಧಿಕೃತಗೊಂಡಿರುವ ರಿಕ್ಷಾ ನಿಲ್ದಾಣ ಹೊರತುಪಡಿಸಿ ಇನ್ನುಳಿದ ಸುಮಾರು 15 ರಿಕ್ಷಾ ನಿಲ್ದಾಣಗಳನ್ನು ಅಧಿಕೃತಗೊಳಿಸಲು ಕಂದಾಯ ಇಲಾಖೆ ಜಾಗ ಗುರುತಿಸಿ ನಕ್ಷೆ ತಯಾರಿಸಿ ನೀಡಬೇಕು ಸದಸ್ಯ ಸಂತೋಷ ಶೆಟ್ಟಿ ಎಂದರು.

ಸಭೆಯಲ್ಲಿ ಉಪಾದ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.

ನೆಹರು ಮೈದಾನ ಪುರಸಭೆಗೆ ಹಸ್ತಾಂತರಿಸಲು ಆಗ್ರಹ

1985ರ ಗಜೆಟ್ ನೋಟಿಫಿಕೇಶನ್ ಪ್ರಕಾರ ಕುಂದಾಪುರ ನೆಹರು ಮೈದಾನವನ್ನು ಪುರಸಭೆಗೆ ಹಸ್ತಾಂತರಿಸಬೇಕಿದೆ. ಈ ಬಗ್ಗೆ ಬೇರೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶ ಇಲ್ಲ. ಸುಮಾರು 4 ಎಕ್ರೆಯಷ್ಟಿದ್ದ ನೆಹರು ಮೈದಾನ ಇದೀಗ 1.65 ಎಕ್ರೆಗೆ ಬಂದು ನಿಂತಿದೆ. ಹೀಗಾಗಿ ಕೂಡಲೇ ನೆಹರು ಮೈದಾನವನ್ನು ಪುರಸಭೆಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಗಿರೀಶ ದೇವಾಡಿಗ ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸಭೆಯ ಗಮನ ಸೆಳೆದ ಸದಸ್ಯರು, ಗುತ್ತಿಗೆದಾರರು ಪ್ರತೀ ಬಾರಿ ಬೇರೆ ಬೇರೆಯವರನ್ನು ಕಳುಹಿಸುವ ಕಾರಣ ಸಭೆಯಲ್ಲಿ ಸೂಚಿಸಿದ್ದೆಲ್ಲಾ ವ್ಯರ್ಥವಾಗುತ್ತದೆ. ಕಾಮಗಾರಿ ನಡೆಯುವುದೇ ಇಲ್ಲ ಎಂದು ಆರೋಪಿಸಿದರು. ಕೋಡಿಯಲ್ಲಿ ಪ್ರವಾಸಿಗರ ರಕ್ಷಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಕ್ಷ್ಮೀಬಾಯಿ ಆಗ್ರಹಿಸಿದರು.

ರಿಂಗ್‌ರೋಡ್ ಕಾಮಗಾರಿ ಅಸಮರ್ಪಕವಾಗಿದೆ. ಪೈಪ್‌ಲೈನ್‌ಗೆ ಜಾಗ ಇಡಲಿಲ್ಲ. ಯುಜಿಡಿಗೆ ಅವಕಾಶ ಇಲ್ಲ. ಹೀಗಾದರೆ ಮಳೆಗಾಲದಲ್ಲಿ ಖಾರ್ವಿಕೇರಿ ಮುಳುಗುತ್ತದೆ. ಕಾಮಗಾರಿ ತತ್‌ಕ್ಷಣ ನಿಲ್ಲಿಸದೇ ಇದ್ದರೆ ಅಷ್ಟೂ 23 ವಾರ್ಡ್‌ಗಳ ಕಾಂಕ್ರಿಟ್‌ನ್ನು ಒಡೆದು ಹಾಕಿ ಪ್ರತಿಭಟಿಸುತ್ತೇವೆ ಎಂದು ಚಂದ್ರಶೇಖರ ಖಾರ್ವಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News