×
Ad

ಎರಡು ದಿನಗಳಿಂದ ವೇಗವಾಗಿ ಸಾಗಿರುವ ಗಣತಿ ಕಾರ್ಯ: ಉಡುಪಿ ಜಿಲ್ಲೆಯಲ್ಲಿ ಶೇ.14.36ರಷ್ಟು ಸಮೀಕ್ಷೆ ಪೂರ್ಣ

Update: 2025-09-29 20:44 IST

ಉಡುಪಿ, ಸೆ.29: ಸರ್ವರ್ ಮತ್ತು ನೆಟ್‌ವರ್ಕ್ ಸಮಸ್ಯೆ, ಸರಿಯಾಗಿ ಕಾರ್ಯ ನಿರ್ವಹಿಸದ ಆ್ಯಪ್ ಸೇರಿದಂತೆ ವಿವಿಧ ಕಾರಣಗಳಿಂದ ಮೊದಲ ಐದು ದಿನಗಳ ಕಾಲ ಮಂದಗತಿಯಲ್ಲಿ ಸಾಗಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಿನ್ನೆ ಮತ್ತು ಇಂದು ವೇಗವನ್ನು ಪಡೆದುಕೊಂಡಿದೆ.

ಇಂದು ಸಂಜೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಇರುವ ಒಟ್ಟು 3,55,771 ಮನೆಗಳ ಗಣತಿ ಪೈಕಿ 51,110 ಮನೆಗಳ ಸರ್ವೆ ಕಾರ್ಯವನ್ನು ಗಣತಿದಾರರು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.14.36 ರಷ್ಟು ಗಣತಿ ಕಾರ್ಯ ನಡೆದಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸೋಮವಾರ ಇಡೀ ದಿನದಲ್ಲಿ ಒಟ್ಟು 19,826 ಮನೆಗಳ ಸರ್ವೆ ಕಾರ್ಯವನ್ನು ಗಣತಿದಾರರು ನಡೆಸಿದ್ದಾರೆ. ಕೆಲವು ಕಡೆಗಳಲ್ಲಿ ಸರ್ವರ್ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ತೊಂದರೆ ಕಾಣಿಸಿಕೊಂಡರೂ ಅವುಗಳನ್ನು ತ್ವರಿತವಾಗಿ ಪರಿಹರಿಸಿಕೊಂಡು ವೇಗವಾಗಿ ಗಣತಿಯನ್ನು ಕೈಗೊಂಡಿದ್ದಾರೆ ಎಂದು ಗದ್ಯಾಳ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 3231 ಗಣತಿ ಬ್ಲಾಕ್‌ಗಳಿದ್ದು, 3219 ಗಣತಿದಾರರನ್ನು ಗೊತ್ತುಪಡಿಸಲಾಗಿದೆ. ಇವುಗಳಲ್ಲಿ ಇಂದೂ ಸಹ ಕೆಲವರು ವಿವಿಧ ಕಾರಣಗಳಿಂದ ಗಣತಿಗೆ ಬಂದಿರಲಿಲ್ಲ. ಆದರೂ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳದೇ ಗಣತಿದಾರರು ವೇಗವಾಗಿ ಮನೆ ಮನೆ ಸರ್ವೆ ನಡೆಸಿದ್ದಾರೆ ಎಂದವರು ಹೇಳಿದ್ದಾರೆ.

ರವಿವಾರ ಉಡುಪಿ ಜಿಲ್ಲೆಯಲ್ಲಿ 11,428 ಮನೆಗಳ ಸರ್ವೆ ನಡೆದಿದ್ದು, ಒಟ್ಟು 27,031 ಮನೆಗಳ ಗಣತಿ ಕಾರ್ಯ ಮುಗಿದಿದೆ ಎಂದು ಸರಕಾರದಿಂದ ಬಿಡುಗಡೆಯಾದ ಮಾಹಿತಿ ತಿಳಿಸಿತ್ತು.

ಅಲ್ಲಲ್ಲಿ ಸಮಸ್ಯೆ: ಕಳೆದ ಶನಿವಾರದ ಬಳಿಕ ಜಿಲ್ಲೆಯಲ್ಲಿ ಸರ್ವೆ ಕಾರ್ಯ ವೇಗವಾಗಿ ನಡೆಯುತ್ತಿದೆ. ನಿನ್ನೆ ಮತ್ತು ಇಂದು 10,000ಕ್ಕೂ ಅಧಿಕ ಮನೆಗಳ ಸರ್ವೆ ಕಾರ್ಯ ನಡೆದಿದೆ. ಆದರೆ ಇಂದು ಸಹ ಅಪರಾಹ್ನದ ಬಳಿಕ ಕೆಲವು ಕಡೆ ಸರ್ವರ್ ಡೌನ್, ಆ್ಯಪ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಇದನ್ನು ಹೊರತು ಪಡಿಸಿದರೆ ಗಣತಿ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.

ಆದರೆ ಎಂಟು ದಿನಗಳ ಬಳಿಕ ಶೇ.10ರಷ್ಟು ಸರ್ವೆ ಕಾರ್ಯ ಮಾತ್ರ ನಡೆದಿರುವುದರಿಂದ ನಿಗದಿಯಾದ ಅ.7ರ ಒಳಗೆ ಗಣತಿ ಕಾರ್ಯ ಪೂರ್ಣಗೊಳ್ಳುವುದು ಕಷ್ಟ ಸಾಧ್ಯ ಎಂದು ಅಭಿಪ್ರಾಯಪಟ್ಟ ಅಂಪಾರು, ಸರ್ವೆಯ ದಿನಾಂಕವನ್ನು ವಿಸ್ತರಿಸಬೇಕಾಗಬಹುದು ಎಂದರು.

ಶಿಸ್ತು ಕ್ರಮದ ಎಚ್ಚರಿಕೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರು ತಮಗೆ ನಿಯೋಜಿಸಲಾಗಿರುವ ಸಮೀಕ್ಷಾ ಬ್ಲಾಕ್‌ಗಳಲ್ಲಿ ಸಮೀಕ್ಷೆಯನ್ನು ನಿರ್ವಹಿಸಲು ಆದೇಶಿಸಲಾಗಿದೆ.

ಯಾವುದೇ ಗಣತಿದಾರರು ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ. ಗಣತಿದಾರರು ಸಮೀಕ್ಷೆಯಲ್ಲಿ ನಿರಾಸಕ್ತಿ ಅಥವಾ ಅಸಡ್ಡೆ ತೋರಿದಲ್ಲಿ, ಅನಗತ್ಯ ನೆಪಗಳನ್ನು ಹೇಳಿ ಗಣತಿ ಕಾರ್ಯದಲ್ಲಿ ನಿಷ್ಕಾಳಜಿ ತೋರಿದಲ್ಲಿ ನಿರ್ದಾಕ್ಷಿಣ್ಯವಾಗಿ ಇಲಾಖಾ ವಿಚಾರಣೆ ನಡೆಸಲು ಹಾಗೂ ಶಿಸ್ತುಕ್ರಮ ಜರುಗಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಸಮೀಕ್ಷೆಗೆ ದಾಖಲೆಗಳನ್ನು ನೀಡಿ ಸಹಕರಿಸಿ

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಸೆ.22ರಿಂದ ಅ.7ರ ವರೆಗೆ ನಡೆಸಲಾಗುತ್ತಿದ್ದು, ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ನಿಯೋಜಿತ ಸಿಬ್ಬಂದಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಪಡಿತರ ಚೀಟಿ, ಮನೆಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳು, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ವಿಕಲಚೇತನರ ಕಾರ್ಡ್, ವಿಕಲಚೇತನ ಪ್ರಮಾಣ ಪತ್ರ ಮತ್ತು ಚುನಾವಣಾ ಗುರುತಿನ ಪತ್ರವನ್ನು ನೀಡಿ ಸರ್ವೆ ಕಾರ್ಯಕ್ಕೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News