ಉಡುಪಿ ಜಿಲ್ಲೆಯ 15 ಮನೆ, ಕೊಟ್ಟಿಗೆಗಳಿಗೆ ಹಾನಿ; ಐದು ಲಕ್ಷ ರೂ. ಅಧಿಕ ನಷ್ಟ
ಉಡುಪಿ, ಆ.19: ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆ ಇಂದು ಬೆಳಗ್ಗೆ 10 ಗಂಟೆಯ ಬಳಿಕ ಬಿಡುವು ಪಡೆಯಿತು. ಹೀಗಾಗಿ ಜನ ಮತ್ತೆ ತಮ್ಮ ದೈನಂದಿನ ಕೆಲಸದತ್ತ ಲವಲವಿಕೆಯಿಂದ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಸೋಮವಾರ ತಡರಾತ್ರಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿದ್ದರು.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 79ಮಿ.ಮೀ. ಮಳೆಯಾಗಿತ್ತು. ಹೆಬ್ರಿಯಲ್ಲಿ ಅತ್ಯಧಿಕ 105.5 ಮೀ.ಮೀ. ಮಳೆ ಬಿದ್ದಿದ್ದರೆ, ಕುಂದಾಪುರದಲ್ಲಿ 92.8ಮಿ.ಮೀ., ಬೈಂದೂರಿನಲ್ಲಿ 83.5ಮಿ.ಮೀ., ಉಡುಪಿಯಲ್ಲಿ 74.9, ಬ್ರಹ್ಮಾವರದಲ್ಲಿ 66.3, ಕಾರ್ಕಳದಲ್ಲಿ 60.9 ಹಾಗೂ ಕಾಪುವಿನಲ್ಲಿ 39.5 ಮಿ.ಮೀ. ಮಳೆ ಬಿದ್ದಿತ್ತು.
14 ಮನೆ, ಕೊಟ್ಟಿಗೆ ಹಾನಿ: ಜಿಲ್ಲೆಯಾದ್ಯಂತ ಬಿದ್ದ ಧಾರಾಕಾರ ಮಳೆಯಿಂದ ಜಿಲ್ಲೆಯ ವಿವಿದೆಡೆಗಳಲ್ಲಿ 14 ಮನೆಗಳಿಗೆ ಭಾಗಶ: ಹಾನಿಯಾಗಿದ್ದರೆ, ಒಂದು ಜಾನುವಾರು ಕೊಟ್ಟಿಗೆಯೂ ಹಾನಿಗೊಳಗಾಗಿತ್ತು. ಇದರಿಂದ ಒಟ್ಟರೆಯಾಗಿ 5.04 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲೇ ಅತ್ಯಧಿಕ ಮನೆ ಹಾನಿ ಸಂಭವಿಸಿತ್ತು. ಕುಂದಾಪುರ ತಾಲೂಕಿನಲ್ಲಿ ಆರು ಮನೆಗಳಿಗೆ ಹಾನಿಯಾದರೆ, ಕಾರ್ಕಳ ತಾಲೂಕಿನಲ್ಲಿ ಎಂಟು ಮನೆಗಳಿಗೆ ಹಾನಿಯಾಗಿ ರುವ ವರದಿ ಬಂದಿತ್ತು.
ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಸೀತಾ ಕುಲಾಲ್ ಅವರ ದನದ ಕೊಟ್ಟಿಗೆ ಮಳೆಯಿಂದ ಭಾಗಶ: ಕುಸಿದು ಬಿದ್ದಿದೆ. ಇದರಿಂದ ಸುಮಾರು 50 ಸಾವಿರ ರೂಗಳ ನಷ್ಟದ ಅಂದಾಜು ಮಾಡಲಾಗಿದೆ. ಬಸ್ರೂರು ಗ್ರಾಮದ ರಾಜೀವಿ ಎಂಬವರ ಮನೆ ಮಳೆಯಿಂದ ಕುಸಿದು 80 ಸಾವಿರ ರೂ.ಗಳಷ್ಟು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಇನ್ನುಳಿದಂತೆ ಕುಂದಾಪುರ ತಾಲೂಕು ನೂಜಾಡಿ, ಕುಂದಾಪುರ ಕಸಬಾ (2), ಯಡಾಡಿ ಮತ್ಯಾಡಿ ಹಾಗೂ ಹೊಸಾಡು ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗೆ ಗಾಳಿ-ಮಳೆಯಿಂದ ಹಾನಿ ಸಂಭವಿಸಿದೆ.
ಗಾಳಿಯಿಂದ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದಲ್ಲಿ ನಾಲ್ಕು, ನಂದಳಿಕೆ ಗ್ರಾಮದಲ್ಲಿ ಎರಡು ಹಾಗೂ ಕಡ್ತಲ ಮತ್ತು ಮುಂಡ್ಕೂರು ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ.
ಜಿಲ್ಲೆಯಲ್ಲಿ ನಾಳೆಯೂ ಆರೆಂಜ್ ಅಲರ್ಟ್ ಇದ್ದು, ಅಪರಾಹ್ನದ ಬಳಿಕ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಒಂದೆರಡು ಭಾಗಗಳಲ್ಲಿ ನಾಳೆಯೂ ಗಾಳಿಯಿಂದ ಕೂಡಿದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.