ಕ್ರಿಶ್ಚಿಯನ್ ಚೇಂಬರ್ ಆಪ್ ಕಾಮರ್ಸ್‌ನ ಪ್ರೇರಣಾ ಪ್ರಶಸ್ತಿ-2025ಕ್ಕೆ ನಾಲ್ವರು ಸಾಧಕರ ಆಯ್ಕೆ
ಉಡುಪಿ, ಸೆ.29: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಉಡುಪಿ ಜಿಲ್ಲೆ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ- 2025ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅ.2ರಂದು ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದ ಸಮುದಾಯ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಸಂತೋಷ್ ಡಿ’ಸಿಲ್ವಾ ತಿಳಿಸಿದ್ದಾರೆ.
ಸೋಮವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ಪ್ರಾರಂಭಗೊಂಡು 13ನೆ ವರ್ಷಕ್ಕೆ ಪಾದಾರ್ಪಣೆಗೊಂಡ ಈ ಸಂಘಟನೆ (ಕೆಸಿಸಿಸಿಐ) ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ (ಇಫ್ಕಾ)ದ ಕರ್ನಾಟಕ ರಾಜ್ಯ ಸ್ಥಾಪಕಾಧ್ಯಕ್ಷರಾಗಿದ್ದ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಇವರ ಕನಸಿನ ಕೂಸು ಎಂದವರು ವಿವರಿಸಿದರು.
ಇಫ್ಕಾದ ಅಂದಿನ ಜಿಲ್ಲಾಧ್ಯಕ್ಷ ಲೂವಿಸ್ ಲೋಬೊ ಮುಂದಾಳತ್ವದಲ್ಲಿ ಡಾ. ಜೆರಿ ವಿನ್ಸೆಂಟ್ ಡಾಯಸ್ ಅಧ್ಯಕ್ಷತೆಯಲ್ಲಿ ಇದು ಪ್ರಾರಂಭಗೊಂಡಿದ್ದು, ಈ ಸಂಘಟನೆ ಸಹಕಾರಿ ಸೊಸೈಟಿ ಕಾಯ್ದೆ 1860 ಅಡಿಯಲ್ಲಿ ನೊಂದಾವಣೆ ಗೊಂಡಿದೆ. ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಒಳಗೊಂಡಿದ್ದರೂ ಸದ್ಯಕ್ಕೆ ಇದರ ಕಾರ್ಯವ್ಯಾಪ್ತಿಯನ್ನು ಉಡುಪಿ ಜಿಲ್ಲೆಗೆ ಸೀಮಿತಗೊಳಿಸಿದ್ದೇವೆ ಎಂದು ಸಂತೋಷ್ ಡಿ ಸಿಲ್ವ ತಿಳಿಸಿದರು.
ಕ್ರೈಸ್ತ ಸಮಾಜದ ಎಲ್ಲಾ ವರ್ಗಗಳನ್ನು (ಕೆಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್ ಒರ್ತೊಡೊಕ್ಸ್ ಹಾಗೂ ಇತರ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ವೃತ್ತಿಪರರು ಹಾಗೂ ಕೃಷಿಕರು ಇದರ ಸದಸ್ಯರಾಗಿ ದ್ದಾರೆ. ಕೇವಲ 30 ಮಂದಿ ಅಜೀವ ಸದಸ್ಯರಿಂದ ಪ್ರಾರಂಭ ಗೊಂಡ ಸಂಸ್ಥೆ ಸದಸ್ಯರ ಸಂಖ್ಯೆ 170ರ ಗಡಿ ದಾಟಿದೆ ಎಂದರು.
ಸಂಘಟನೆ ಕಳೆದ ಐದು ವರ್ಷಗಳಿಂದ ಸಮುದಾಯದ ಅರ್ಹ ಉದ್ಯಮಿಗಳನ್ನು ಗುರುತಿಸಿ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದೇ ಅ.2ರಂದು ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಬೆಸಿಲಿಕಾದ ಸಮುದಾಯ ಭವನದಲ್ಲಿ ನಡೆಯುವ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ 2025ನ್ನು ಸಮಾಜದ ನಾಲ್ವರು ಸಾಧಕರಿಗೆ ಪ್ರದಾನ ಮಾಡಲಿದ್ದೇವೆ ಎಂದರು.
ವರ್ಷದ ಉದ್ಯಮಿ ಪ್ರಶಸ್ತಿಯನ್ನು ಪಲಿಮಾರಿನ ಫ್ರಾನ್ಸಿಸ್ ಡಿ’ಸೋಜಾ, ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಉಡುಪಿಯ ಲವಿಟಾ ಅಂದ್ರಾದೆ ಅವರಿಗೆ, ವರ್ಷದ ಯುವ ಉದ್ಯಮಿ ಪ್ರಶಸ್ತಿಯನ್ನು ಸುಭಾಷ್ ನಗರದ ಅರುಣ್ ಸುಶೀಲ್ ಕೋಟ್ಯಾನ್‌ಗೆ ಹಾಗೂ ವರ್ಷದ ಪ್ರಗತಿಪರ ಕೃಷಿಕ ಪ್ರಶಸ್ತಿ ಯನ್ನು ಶಂಕರಪುರದ ಡಾ.ಜೋಸೆಫ್ ಲೋಬೋ ಇವರಿಗೆ ನೀಡಿ ಗೌರವಿಸಲಾಗುತ್ತದೆ ಎಂದು ಸಂತೋಷ್ ತಿಳಿಸಿದರು.
ಸಂಜೆ 6:00ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಚೇಂಬರಿನ ಗೌರವಾಧ್ಯಕ್ಷ ಡಾ. ಜೆರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್‌ಐ ಸಭೆಯ ಧರ್ಮಾಧ್ಯಕ್ಷ ರೈಟ್ ರೆವರೆಂಡ್ ಹೇಮಚಂದ್ರ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಆಸಕ್ತ ಕ್ರೈಸ್ತ ಯುವ ಉದ್ಯಮಿಗಳಿಗೆ ಪರಿಣಿತ ಸಂಪನ್ಮೂಲ ವ್ಯಕ್ತಿಗಳಾದ ಪತ್ರಕರ್ತ ವಾಲ್ಟರ್ ನಂದಳಿಕೆ, ಉದ್ಯಮಿ ಸೌಜನ್ಯ ಹೆಗ್ಡೆ ಮಾಹಿತಿ ಕಾರ್ಯಗಾರ ನಡೆಸಿಕೊಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಖಜಾಂಚಿ ಮ್ಯಾಕ್ಷಿಮ್ ಸ್ಟೇಫನ್ ಸಲ್ಡಾನಾ, ಸಹಕಾರ್ಯದರ್ಶಿ ವಿಲ್ಸನ್ ಡಿಸೋಜಾ, ನಿರ್ದೇಶಕ ಜೀವನ್ ಸಾಲಿನ್ಸ್ ಉಪಸ್ಥಿತರಿದ್ದರು.