×
Ad

ಉಡುಪಿ: ಜೂ.21ರಂದು ಪ್ರೊ.ಕು.ಶಿ. ಪ್ರಶಸ್ತಿ ಪ್ರದಾನ

Update: 2025-06-18 21:44 IST

ಉಡುಪಿ, ಜೂ.18: ಉಡುಪಿಯನ್ನು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪ್ರಪಂಚಕ್ಕೆ ಪರಿಚಯಿಸಿದ ಸಂಘಟಕ, ಖ್ಯಾತ ಲೇಖಕ, ಅಂಕಣಕಾರ ಪ್ರೊ.ಕು.ಶಿ.ಹರಿದಾಸ ಭಟ್ಟರ ನೆನಪಿನಲ್ಲಿ ನೀಡಲಾಗುವ ಪ್ರೊ.ಕು.ಶಿ ಹರಿದಾಸ ಭಟ್ ಜನ್ಮಶತಮಾನೋತ್ಸವ ಜಾನಪದ ಪ್ರಶಸ್ತಿ ಹಾಗೂ ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ಜೂ.21ರ ಶನಿವಾರ ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ.

ಆಶಾ ಕುತ್ಯಾರ್ ಹಾಗೂ ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ. ಕು.ಶಿ ಹರಿದಾಸ ಭಟ್ಟರ ನೆನಪಿನಲ್ಲಿ ನೀಡುವ ಪ್ರಶಸ್ತಿಗಳನ್ನು ಕ್ರಮವಾಗಿ ಜಾನಪದ ವಿದ್ವಾಂಸರಾದ ಮೈಸೂರಿನ ಡಾ.ಜಿ.ಕೆ.ರಾಜೇಂದ್ರ ಹಾಗೂ ಡಾ.ವಿಜಯಶ್ರೀ ಸಬರದ ಅವರಿಗೆ ಪ್ರದಾನ ಮಾಡಲಾಗುವುದು.

ಎಂಜಿಎಂ ಕಾಲೇಜಿನ ಟಿ.ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಕೇಂದ್ರ ದಲ್ಲಿ ಜೂ.21ರ ಅಪರಾಹ್ನ 3:00ಕ್ಕೆ ನಡೆಯುವ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ ಪ್ರದಾನ ಮಾಡಲಿರುವರು. ಅಧ್ಯಕ್ಷತೆಯನ್ನು ಮಾಹೆಯ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಡಾ.ಬಿ.ಎ.ವಿವೇಕ ರೈ, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತ ಮಯ್ಯ ಉಪಸ್ಥಿತರಿರುವರು. ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ.ಎನ್.ಕೆ. ಲೋಲಾಕ್ಷಿ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣ ಮಾಡಲಿರುವರು.

ಡಾ.ಡಿ.ಕೆ.ರಾಜೇಂದ್ರರಿಗೆ 2024ರ ಸಾಲಿನ ಜನ್ಮಶತಮಾನೋತ್ಸವ ಜಾನಪದ ಪ್ರಶಸ್ತಿಯನ್ನು ಹಾಗೂ ಬೆಂಗಳೂರಿನ ಡಾ.ವಿಜಯಶ್ರೀ ಸಬರದ ಅವರಿಗೆ 2025ರ ಸಾಲಿನ ಜಾನಪದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News