ಉಡುಪಿ| ಗಾಳಿ ಮಳೆಯಿಂದ 22 ಮನೆಗಳಿಗೆ ಹಾನಿ: 13 ಲಕ್ಷ ರೂ. ನಷ್ಟ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆಯಿಂದ ಮಳೆ ಪ್ರಮಾಣ ಇಳಿಕೆಯಾಗಿದ್ದು, ರವಿವಾರ ಪೂರ್ತಿ ದಿನ ಬಿಸಿಲಿನ ವಾತಾ ವರಣ ಕಂಡುಬಂದಿದೆ. ಆದರೂ ಕೆಲವು ಕಡೆ ಬೀಸಿದ ಗಾಳಿಮಳೆಗೆ ಒಟ್ಟು 22 ಮನೆಗಳಿಗೆ ಹಾನಿಯಾಗಿ ಸುಮಾರು 13.16 ಲಕ್ಷ ರೂ. ನಷ್ಟವಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 7.8 ಮಿ.ಮೀ. ಮಳೆಯಾಗಿದ್ದು, ಕಾರ್ಕಳ- 5.2ಮಿ.ಮೀ., ಕುಂದಾಪುರ-11.9ಮಿ.ಮೀ., ಉಡುಪಿ- 3.6ಮಿ.ಮೀ., ಬೈಂದೂರು- 10.6ಮಿ.ಮೀ., ಬ್ರಹ್ಮಾವರ- 1.5 ಮಿ.ಮೀ., ಕಾಪು- 1.3ಮಿ.ಮೀ., ಹೆಬ್ರಿ - 11.7 ಮಿ.ಮೀ. ಮಳೆಯಾಗಿದೆ.
ಗಾಳಿ ಮಳೆಯಿಂದ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಅಲಿತಾ ಆಚಾರ್ಯ, ಗಂಗಾವತಿ, ಶೇಖರ ಪೂಜಾರಿ, ರವಿ ಆಚಾರ್ಯ, ಶಕುಂತಲ ಸೇರಿಗಾರ್ತಿ ಕೊಡವೂರು ಗ್ರಾಮದ ಕಸ್ತೂರಿ, ಮರ್ಣೆ ಗ್ರಾಮದ ರಾಧ, ಪುತ್ತೂರು ಗ್ರಾಮದ ಕೆ.ರತ್ನಾಕರ ಆಚಾರ್ಯ, ಕಡೆಕಾರು ಗ್ರಾಮದ ನೇತ್ರಾವತಿ, ಕೊರಂಗ್ರಪಾಡಿ ಗ್ರಾಮದ ಹರಿಜ ಶೆಟ್ಟಿ, ಅಂಜಾರು ಗ್ರಾಮದ ಯಾದವ ಎಂಬವರ ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದ್ದು, ಒಟ್ಟು 7.75 ಲಕ್ಷ ರೂ. ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಬಾಬಿ, ಕಂದಾವರ ಗ್ರಾಮದ ಗೋವಿಂದ ಪೂಜಾರಿ, ಸಿದ್ದಾಪುರ ಗ್ರಾಮದ ಪಾರ್ವತಿ ಶೆಡ್ತಿ, ಸೀತಾ, ಬಸ್ರೂರು ಗ್ರಾಮದ ಕಮಲ ಪೂಜಾರ್ತಿ, ಆಲೂರು ಗ್ರಾಮದ ನಾರಾಯಣ ಪೂಜಾರಿ ಎಂಬವರ ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು 1.56 ಲಕ್ಷ ರೂ. ನಷ್ಟ ಉಂಟಾಗಿದೆ.
ಕಾಪು ತಾಲೂಕಿನ ಕುತ್ಯಾರು ಗ್ರಾಮದ ಜಗನ್ನಾಥ ಮುಖಾರಿ, ಬೆಳ್ಳೆ ಗ್ರಾಮದ ಗೀತಾ ವಿಠಲ, ನಂದಿಕೂರು ಗ್ರಾಮದ ವಸಂತಿ, ತೆಂಕ ಗ್ರಾಮದ ಇಂದಿರಾ ಪೂಜಾರ್ತಿ , ಶಿರ್ವ ಗ್ರಾಮದ ಪದ್ಮ ಮೂಲ್ಯಾಡಿ ಎಂಬವರ ಮನೆಗಳ ಮೇಲೆ ಭಾರೀ ಗಾಳಿಮಳೆಯಿಂದ ಮರ ಬಿದ್ದು ಹಾನಿಯಾಗಿ ಒಟ್ಟು ೩.೮೫ಲಕ್ಷ ರೂ. ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ತೇಜಪ್ಪ ಶೆಟ್ಟಿ, ಯಡಮೊಗೆ ಗ್ರಾಮದ ಶ್ರೀನಿವಾಸ ಹೆಬ್ಬಾರ್ ಎಂಬವರ ತೋಟಗಾರಿಕೆ ಬೆಳೆ ಹಾನಿಯಾಗಿ ಒಟ್ಟು ೮೦ಸಾವಿರ ರೂ. ಹಾಗೂ ಕೊರ್ಗಿ ಗ್ರಾಮದ ಬುಡ್ಡಿ ಕುಲಾಲ್ತಿ ಎಂಬವರ ಜಾನು ವಾರು ಕೊಟ್ಟಿಗೆ ಭಾಗಶಃ ಹಾನಿಯಾಗಿ ಸುಮಾರು ೫,೦೦೦ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.
ಕಡೆಕಾರಿಗೆ ಶಾಸಕರ ಭೇಟಿ: ಕಡೆಕಾರ್ ಗ್ರಾಪಂ ವ್ಯಾಪ್ತಿಯ ಕನ್ನರ್ಪಾಡಿ ಲೇಬರ್ ಕಾಲನಿಯ ನೇತ್ರಾವತಿ ಎಂಬವರ ಮನೆಯ ಮೇಲೆ ಭಾರೀ ಗಾಳಿ ಮಳೆಗೆ ಮರ ಬಿದ್ದು ಹಾನಿಗೀಡಾದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿಯೇ ಗ್ರಾಮ ಲೆಕ್ಕಾಧಿಕಾರಿಗೆ ಹಾನಿಯ ಬಗ್ಗೆ ಕಂದಾಯ ಇಲಾಖೆಗೆ ವರದಿ ನೀಡುವಂತೆ ಸೂಚನೆ ನೀಡಿ, ಸರಕಾರದಿಂದ ಗರಿಷ್ಠ ಪರಿಹಾರ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಗ್ರಾಪಂ ಸದಸ್ಯ ಪ್ರಶಾಂತ್ ಸಾಲ್ಯಾನ್, ಪ್ರಮುಖರಾದ ಜಯಕರ ಸನಿಲ್ ಉಪಸ್ಥಿತರಿದ್ದರು.