ಪರ್ಕಳ: ಫೆ. 23ಕ್ಕೆ ಮಂಗಳ ಕಲಾ ವೇದಿಕೆಯಿಂದ ‘ಕಲಾ ಸಂಗಮ’
ಉಡುಪಿ, ಫೆ.19: ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆ ತನ್ನ 21ನೇ ವರ್ಷದ ಸಂಭ್ರಮ ‘ಕಲಾ ಸಂಗಮ’ ಕಾರ್ಯಕ್ರಮವನ್ನು ಫೆ.23ರ ರವಿವಾರ ಅಪರಾಹ್ನ 2 ರಿಂದ ಪರ್ಕಳದ ಶ್ರೀವಿಘ್ನೇಶ್ವರ ಸಭಾಭವನದಲ್ಲಿ ಆಯೋಜಿಸಿದೆ ಎಂದು ವೇದಿಕೆಯ ಸಂಚಾಲಕ ಎಂ.ಮಂಜುನಾಥ ಉಪಾಧ್ಯ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಪರ್ಕಳ ಇವರು 2 ಗಂಟೆಗೆ ಉದ್ಘಾಟಿಸಲಿದ್ದಾರೆ. ಪರ್ಕಳದ ಉದ್ಯಮಿ ಮೋಹನದಾಸ ನಾಯಕ್ ಉಪಸ್ಥಿತರಿರುವರು ಎಂದರು.
ಅಪರಾಹ್ನ 2:15ಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ತೋನ್ಸೆ ಪುಷ್ಕಳಕುಮಾರ್ ಇವರಿಂದ ‘ಗಜಗೌರಿ ವ್ರತ’ ಹರಿಕಥಾ ಕಾಲಕ್ಷೇಪವಿದೆ. ಸಂಜೆ 4 ರಿಂದ ಸಾನ್ವಿ ರವೀಂದ್ರ ನಾಯಕ್‌ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ ಎಂದರು.
ಸಂಜೆ 4:45ಕ್ಕೆ ಸಭಾ ಕಾರ್ಯಕ್ರಮವು ವೇದಿಕೆಯ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ಪರ್ಕಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ ಮಧ್ವರಾಜ್, ಆಕಾಶವಾಣಿ ಮಂಗಳೂರಿನ ನಿವೃತ್ತ ನಿಲಯ ನಿರ್ದೇಶಕ ಡಾ.ಪೆರ್ಲ ವಸಂತಕುಮಾರ್, ಪ್ರಸಿದ್ಧ ತುಳು ಕಲಾವಿದ ಭೋಜರಾಜ ವಾಮಂಜೂರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಚಿತ್ರನಟ ಯೋಗೀಶ್ ಶೆಟ್ಟಿ ಡಿ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ರಂಗ ಕಲಾವಿದ ಹಾಗೂ 80 ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ ಕೋಟ್ಯಾನ್, ಮಣಿಪಾಲದ ದೂರದರ್ಶಕ ತಯಾರಕ ಆರ್. ಮನೋಹರ ಪರ್ಕಳ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು, ಚಿತ್ರಕಲಾವಿದ ಮಹೇಶ್ ಆಚಾರ್ಯ ಮರ್ಣೆ ಇವರನ್ನು ಸನ್ಮಾನಿಸಲಾಗುವುದು ಎಂದು ಮಂಜುನಾಥ ಉಪಾಧ್ಯ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6:15ರಿಂದ ಮಹಾಲಿಂಗೇಶ್ವರ ನಾಟ್ಯ ತಂಡ ಮರ್ಣೆ ಇವರಿಂದ ನೃತ್ಯರೂಪಕಗಳು, ಮಾ.ಸಂಪ್ರೀತ್‌ನಾಯಕ್ ಹಾಗೂ ಸೃಜನ್ ನಾಯಕ್‌ರಿಂದ ಕೊಳಲು ವಾದನ ಹಾಗೂ 7 ಗಂಟೆಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಸಂದೀಪ್ ನಾಯ್ಕ್ ಪರ್ಕಳ, ಸಹ ಸಂಚಾಲಕ ಗೋಪಿ ಹಿರೇಬೆಟ್ಟು, ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಚಕ್ರತೀರ್ಥ ಹಾಗೂ ಕೋಶಾಧಿಕಾರಿ ಗಣೇಶ್ ಸಣ್ಣಕ್ಕಿಬೆಟ್ಟು ಉಪಸ್ಥಿತರಿದ್ದರು.