ಉಡುಪಿ: 24ಗಂಟೆಗಳಲ್ಲಿ 11.95 ಸೆ.ಮೀ. ಮಳೆ, 20 ಮನೆ-ಕೊಟ್ಟಿಗೆಗೆ ಹಾನಿ
ಉಡುಪಿ, ಜೂ.27: ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 11.95 ಸೆ.ಮೀ.ನಷ್ಟು ಮಳೆ ಯಾಗಿದ್ದು, ಕಾಪುವಿನಲ್ಲಿ ಅತ್ಯಧಿಕ 17.38 ಸೆ.ಮೀ. ಮಳೆ ಸುರಿದಿದೆ. ಉಳಿದಂತೆ ಬ್ರಹ್ಮಾವರದಲ್ಲಿ 15.92ಸೆ.ಮೀ., ಕಾರ್ಕಳದಲ್ಲಿ 15.43ಸೆ.ಮೀ., ಉಡುಪಿಯಲ್ಲಿ 14.29 ಸೆ.ಮೀ., ಹೆಬ್ರಿಯಲ್ಲಿ 10.52ಸೆ.ಮೀ. ಮಳೆಯಾದರೆ ಕುಂದಾಪುರದಲ್ಲಿ 8.34 ಹಾಗೂ ಬೈಂದೂರಿನಲ್ಲಿ 8.14ಸೆ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
ಮಳೆ ಇಂದು ಸಹ ಮುಂದುವರಿದಿದ್ದು, ಸಂಜೆಯ ಬಳಿಕ ವಿಶ್ರಾಂತಿ ಪಡೆದಿದೆ. ನಿನ್ನೆ ರಾತ್ರಿಯ ಬಾರೀ ಗಾಳಿ-ಮಳೆಯಿಂದ ಜಿಲ್ಲೆಯ ನಾನಾ ಕಡೆಗಳಲಿಲ 15ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ 5ರಷ್ಟು ಜಾನುವಾರು ಕೊಟ್ಟಿಗೆ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ದಿನದಲ್ಲಿ ಒಟ್ಟಾರೆಯಾಗಿ 5.50ಲಕ್ಷ ರೂ.ಮೌಲ್ಯದ ಸೊತ್ತುಗಳಿಗೆ ಹಾನಿಯಾ ಗಿರುವುದಾಗಿ ಅಂದಾಜಿಸಲಾಗಿದೆ.
ಕಾರ್ಕಳದ ನೀರೆ ಗ್ರಾಮದ ಗುರುವಾರ ವಾರದ ಸಂತೆಯ ವೇಳೆ ಮೀನು ಮಾರಾಟದ ಶೆಡ್ ಮೇಲೆ ಮರದ ಗೆಲ್ಲು ಉರುಳಿ ಇಬ್ಬರು ಗಾಯ ಗೊಂಡಿದ್ದಾರೆ. ಕುಂದಾಪುರದ ಹೆಂಗವಳ್ಳಿ ಗ್ರಾಮದ ಅಬುಬಕ್ಕರ್ ಹಾಗೂ ಮೂಸ ಹರ್ಷದ್ ಎಂಬವರ ಅಡಿಕೆ ತೋಟದ ಮರಗಳಿಗೆ ಹಾನಿಗಾಗಿದೆ. ಗುಜ್ಜಾಡಿಯ ವಾಸುದೇವ ಶೇರೆಗಾರ್ ಅವರ ಜಾನುವಾರು ಕೊಟ್ಟಿಗೆಗೂ ಹಾನಿಯಾಗಿದೆ.
ಬೈಂದೂರು ತಾಲೂಕು ಕಿರಿಮಂಜೇಶ್ವರದ ನಾರಾಯಣ ಹೆಬ್ಬಾರ್ ಅವರ ಮನೆಯ ಕೊಟ್ಟಿಗೆ ಮೇಲೆ ಮರ ಬಿದ್ದು 50 ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ. ಬ್ರಹ್ಮಾವರ ತಾಲೂಕು ಹಂದಾಡಿಯ ರಘುನಾಥ್ ನಾಯಕ್ ಅವರ ಕೊಟ್ಟಿಗೆಗ ಗಾಳಿ-ಮಳೆಯಿಂದ ಹಾನಿಯಾಗಿದೆ. ಒಟ್ಟಾರೆಯಾಗಿ ಇವುಗಳಿಂದ ಒಟ್ಟಾರೆಯಾಗಿ ಒಂದೂವರೆ ಲಕ್ಷದಷ್ಟು ಹಾನಿಯ ಅಂದಾಜು ಮಾಡಲಾಗಿದೆ.
ಮನೆಗಳಿಗೆ ಹಾನಿ: ಕುಂದಾಪುರ ತಾಲೂಕು ಕೋಟೇಶ್ವರದ ಭಾರತಿ, ಕಾವ್ರಾಡಿಯ ಶಾರದ ಅವರ ವಾಸ್ತವ್ಯದ ಮನೆಗಳಿಗೆ ಭಾಗಶ: ಹಾನಿಯಾಗಿ 75ಸಾವಿರದಷ್ಟು ನಷ್ಟ ಉಂಟಾಗಿದೆ. ಉಡುಪಿ ತಾಲೂಕು ಪೆರ್ಡೂರಿನ ರಾಘವೇಂದ್ರ, ಗೋಪಾಲ ಹಾಗೂ ಗಣಪ ಹರಿಜನ ಅಲ್ಲದೇ ಪುತ್ತೂರು ಗ್ರಾಮದ ಲೋಕು ಪೂಜಾರಿ ಇವರ ಮನೆಗಳಿಗೆ ಹಾನಿಯುಂಟಾಗಿದೆ.
ಕಾಪು ತಾಲೂಕು ಮೂಳೂರು ಗ್ರಾಮದ ಉದಯಪೂಜಾರಿ, ಇನ್ನಂಜೆಯ ಅರುಣ್‌ಕುಮಾರ್, ಕಳತ್ತೂರಿನ ಶಾಲಿನಿ ಮುಖಾರ್ತಿ ಅಲ್ಲದೇ ಕಾರ್ಕಳ ತಾಲೂಕು ಎಳ್ಳಾರೆಯ ಸುಮತಿ ನಾಯ್ಕ, ಬ್ರಹ್ಮಾವರ ತಾಲೂಕು ಹಂದಾಡಿಯ ಶೀನ ಮತ್ತು ಪಾಂಡೇಶ್ವರದ ರೋಜಾ ಡಿ ಅಲ್ಮೇಡಾ ಇವರ ಮನೆಗಳಿಗೂ ಮಳೆಯಿಂದ ಹಾನಿಯಾಗಿದೆ. ಇವುಗಳಿಂದ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ನಾಲ್ಕು ಲಕ್ಷ ರೂ.ಗಳ ನಷ್ಟ ಸಂಭವಿಸಿದೆ ಎಂದು ನಿಯಂತ್ರಣ ಕಚೇರಿ ವರದಿ ತಿಳಿಸಿದೆ.