ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 250ಕೋಟಿ ಅನುದಾನ ವಿವಿಧ ಯೋಜನೆಗಳ ಅನುಷ್ಠಾನ: ಪ್ರಶಾಂತ್ ಜತ್ತನ್ನ
ಉಡುಪಿ, ಅ.20: ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಸಂಸ್ಥೆಗಳ ಬಲವರ್ಧನೆಗಾಗಿ ಸ್ಥಾಪಿಸಿರುವ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂ. ಅನುದಾನ ವನ್ನು ಒದಗಿಸಲಾಗಿದ್ದು ಆ ಮೂಲಕ ವಿವಿಧ ಸಾಲ ಯೋಜನೆಗಳು, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ತನ್ನ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳು ಮತ್ತು ಅಧಿಕೃತ ವೆಬ್ ಪೋರ್ಟಲ್‌ನ ಲೋಕಾರ್ಪಣೆಯನ್ನು ಅ.17ರಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ನೆರೆವೇರಿಸಿದ್ದು ನಿಗಮದಿಂದ ಸಿಗುವ ಎಲ್ಲಾ ರೀತಿಯ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳ ವಿವರ ಇದರಲ್ಲಿದೆ ಎಂದರು.
ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 50,000ರೂ.ನಿಂದ 5 ಲಕ್ಷವರೆಗೆ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿ ಗಳಿಗೆ 20 ಲಕ್ಷ ರೂ.ವರೆಗೆ ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ, ಟ್ಯಾಕ್ಸಿ /ಸರಕು ಸಾಗಣೆ ವಾಹನ/ಆಟೋ ರಿಕ್ಷಾ ಖರೀದಿಗೆ ಸಹಾಯಧನದ ಸ್ವಾಲಂಬಿ ಸಾರಥಿ ಯೋಜನೆ, ಸಣ್ಣ ವ್ಯಾಪಾರ ಪ್ರಾರಂಭಿಸಲು ಅಥವಾ ವಿಸ್ತರಿಸಲು ಶ್ರಮಶಕ್ತಿ ಯೋಜನೆಯಡಿ 50,000 ರೂ.ಸಾಲ ನೀಡಲಾಗುತ್ತಿದ್ದು ಇದಕ್ಕೆ 25,000ರೂ. ಸಹಾಯಧನ ಲಭ್ಯವಿದೆ ಎಂದರು.
ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ವಿವಾಹವಾಗದ ಮಹಿಳೆಯರ ಆರ್ಥಿಕ ಸಬಲಿಕರಣಕ್ಕಾಗಿ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿ 50,000ರೂ. ಸಾಲ ನೀಡಲಾಗುತ್ತಿದ್ದು ಇದಕ್ಕೆ 25,000ರೂ. ಸಹಾಯಧನ ಲಭ್ಯವಿದೆ. ಸಣ್ಣ ವ್ಯಾಪಾರ/ಚಿಲ್ಲರೆ ಮಾರಾಟ /ರಿಪೇರಿ ಸೇವೆ ಪ್ರಾರಂಭಿಸಲು ವೃತ್ತಿ ಪ್ರೋತ್ಸಾಹ ಯೋಜನೆಯಡಿ 1 ಲಕ್ಷ ಸಾಲ ನೀಡಲಾಗುತ್ತಿದ್ದು ಇದಕ್ಕೆ 50,000ರೂ. ಸಹಾಯಧನ ಲಭ್ಯವಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ತೋಡುವುದು, ಪಂಪ್ಸೆಟ್ ಅಳವಡಿಸುವುದು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು 3 ಲಕ್ಷದಿಂದ 4ಲಕ್ಷವರೆಗೆ ಸಹಾಯಧನ ನೀಡಲಾಗುತ್ತದೆ. ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆ ಪ್ರಾರಂಭಿಸಲು ನೇರ ವ್ಯವಹಾರ ಸಾಲ ಯೋಜನೆಯಡಿ 20ಲಕ್ಷವರೆಗೆ ಸಾಲ ಒದಗಿಸಲಾಗುತ್ತದೆ. ಸ್ವ ಉದ್ಯೋಗ ಚಟುವಟಿಕೆ ಕೈಗೊಳ್ಳಲು ಮಹಿಳಾ ಸ್ವಸಹಾಯ ಸಂಘಗಳ ಸಹಾಯಧನ ಯೋಜನೆ, 2ಲಕ್ಷವರೆಗೆ ಸಾಲ ನೀಡಲಾಗುತ್ತಿದ್ದು ಇದಕ್ಕೆ ಶೇ.50 ಸಹಾಯಧನ ಲಭ್ಯವಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸಮುದಾಯ ಆಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳು ನಿಗಮದ ವತಿಯಿಂದ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಯಕರುಗಳಾದ ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವೆರ, ವಿನೋದ್ ಕ್ರಾಸ್ತಾ, ಸದಾನಂದ ಕಾಂಚನ್, ಶರ್ಫುದ್ದೀನ್, ಚಾರ್ಲ್ಸ್ ಅಂಬ್ಲರ್, ಗ್ಲಾಡ್ಸನ್ ಉಪಸ್ಥಿತರಿದ್ದರು.