ಮಲಬಾರ್ ಗೋಲ್ಡ್‌ನಿಂದ 28 ಲಕ್ಷ ರೂ.ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ಫೆ.25: ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ಹೆಣ್ಣು ಮಕ್ಕಳಿಗೆ 28 ಲಕ್ಷ ರೂ.ಗಳಷ್ಟು ವಿದ್ಯಾರ್ಥಿ ವೇತನವನ್ನು ತನ್ನ ಸಿಎಸ್‌ಆರ್ ನಿಧಿಯಿಂದ ವಿತರಿಸುವ ಮೂಲಕ ಮಲಬಾರ್ ಗೋಲ್ಡ್ ತನ್ನ ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಕಾಳಜಿಯನ್ನು ತೋರಿಸಿದ್ದು, ಇದು ಜಿಲ್ಲೆಯ ಉಳಿದ ಸಂಸ್ಥೆಗಳಿಗೂ ಪ್ರೇರಣೆಯಾಗಬೇಕಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಅಧೀನದ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ 45 ಸರಕಾರಿ ಮತ್ತು ಅನುದಾನಿತ ಕಾಲೇಜುಗಳ 328 ಮಂದಿ ವಿದ್ಯಾರ್ಥಿನಿಯರಿಗೆ ಒಟ್ಟು 28 ಲಕ್ಷ ರೂ.ಗಳ ವಿದ್ಯಾರ್ಥಿ ವೇತನವನ್ನು ವಿತರಿಸುವ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಸಿಎಸ್‌ಆರ್ ಕಾರ್ಯಕ್ರಮದಡಿ ಸಂಸ್ಥೆ ದೇಶಾದ್ಯಂತ ನಡೆಸುತ್ತಿರುವ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮ ಗಳನ್ನು ವಿವರಿಸಿ ದೇಶಾದ್ಯಂತ ಇದರಡಿ 282 ಕೋಟಿ ರೂ.ಗಳಿಗೂ ಅಧಿಕ ಆರ್ಥಿಕ ನೆರವು ನೀಡಿದೆ ಎಂದರು.
ಈವರೆಗೆ 17 ರಾಜ್ಯಗಳಲ್ಲಿ 95,000ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ 60 ಕೋಟಿ ರೂ.ಗಳಿಗೂ ಅಧಿಕ ವಿದ್ಯಾರ್ಥಿವೇತನ ವಿತರಿಸಿದ್ದೇವೆ ಎಂದರಲ್ಲದೇ ಪ್ರಸ್ತುತ ವರ್ಷದಲ್ಲಿ ದೇಶಾದ್ಯಂತ 21,000 ವಿದ್ಯಾರ್ಥಿನಿಯರಿಗೆ 16 ಕೋಟಿ ರೂ.ವಿದ್ಯಾರ್ಥಿ ವೇತನ ವಿತರಿಸುವ ಗುರಿಯಿದೆ. ಕಳೆದ ವರ್ಷ 17 ಸಾವಿರ ವಿದ್ಯಾರ್ಥಿನಿಯರಿಗೆ ಹಂಚಿದ್ದೇವೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಈ ವರ್ಷ 491 ಕಾಲೇಜುಗಳ 5,501 ವಿದ್ಯಾರ್ಥಿನಿಯರಿಗೆ 4.74 ಕೋಟಿ ರೂ.ಮೊತ್ತವನ್ನು ಹಂಚಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ 1469 ವಿದ್ಯಾರ್ಥಿನಿಯರಿಗೆ 38.15 ಲಕ್ಷ ರೂ.ಹಂಚಿದ್ದೇವೆ ಎಂದು ಹಫೀಝ್ ವಿವರಿಸಿದರು.
ಇನ್ನು ಬೆಂಗಳೂರು, ಹೈದರಾಬಾದ್‌ಗಳಲ್ಲಿ ಬೀದಿ ಬದಿಯಲ್ಲಿ ವಾಸಿಸುವ ನಿರ್ಗತಿಕ ಮಹಿಳೆಯರ ಆರೈಕೆ ಹಾಗೂ ರಕ್ಷಣೆಗೆ ‘ಅಜ್ಜಿಮನೆ’ಗಳನ್ನು ಸ್ಥಾಪಿಸಿ ಅಲ್ಲಿ ಆರೈಕೆ ನೀಡಲಾಗುತ್ತಿದೆ. ಉಡುಪಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಪ್ರತಿದಿನ 250 ಆಹಾರಪೊಟ್ಟಣಗಳನ್ನು ಹಂಚಲಾಗುತ್ತಿದೆ. ಶಾಲೆ ಬಿಟ್ಟ ಹಾಗೂ ಎಂದಿಗೂ ಶಾಲೆಗೆ ದಾಖಲಾಗದ ಮಕ್ಕಳಿಗಾಗಿ 12 ರಾಜ್ಯಗಳಲ್ಲಿ 581 ಮೈಕ್ರೋ ಲರ್ನಿಂಗ್ ಸೆಂಟರ್‌ಗಳನ್ನು ಸ್ಥಾಪಿಸಿ 25,000ಕ್ಕೂ ಅಧಿಕ ಮಕ್ಕಳನ್ನು ತಲುಪಿದ್ದು, 9000 ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ, ಸಾಫಲ್ಯ ಟ್ರಸ್ಟ್‌ನ ಪ್ರವರ್ತಕಿ, ಉದ್ಯಮಿ ನಿರುಪಮಾ ಪ್ರಸಾದ್ ಶೆಟ್ಟಿ, ಫಾ.ವಿಲಿಯಂ ಮಾರ್ಟಿಸ್, ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆಂಕಟೇಶ್ ಪೈ, ಸಾಮಾಜಿಕ ಕಾರ್ಯಕರ್ತರಾದ ಮಮತಾ ಶೆಟ್ಟಿ, ರೇಷ್ಮಾ ತೋಟ ಉಪಸ್ಥಿತರಿದ್ದರು.
ಡಾ. ಚರಿಷ್ಮಾ ಶೆಟ್ಟಿ ಹಾಗೂ ವಿದ್ಯಾ ಸರಸ್ವತಿ ಅವರು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಸಿಎಸ್‌ಆರ್ ನಿಧಿಯ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಹೈದರ್ ಕೆ., ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಜಿಆರ್‌ಎಂ ರಾಘವೇಂದ್ರ ನಾಯಕ್ ಅಜೆಕಾರು, ಸೇಲ್ಸ್ ಮ್ಯಾನೇಜರ್ ಮುಸ್ತಾಫಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಸಹಕರಿಸಿದರು. ವಿಘ್ನೇಶ್ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು.