×
Ad

ಉಡುಪಿ ಜಿಲ್ಲೆಯಲ್ಲಿ 3 ದಿನ ಭಾರಿ ಗಾಳಿ-ಮಳೆ: ಹವಾಮಾನ ಇಲಾಖೆಯಿಂದ ಮುನ್ಸೂಚನೆ

Update: 2025-05-19 19:58 IST

ಉಡುಪಿ, ಮೇ 19: ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ಮುಂದಿನ 3 ದಿನಗಳ ಕಾಲ( ಮೇ 20ರಿಂದ 23ರವರೆಗೆ) ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ. ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರಬೇಕು. ಸಾರ್ವಜನಿಕರು, ಮಕ್ಕಳು, ಕಾರ್ಮಿಕರು ಸಿಡಿಲು ಬೀಳುವ ಸಂದರ್ಭ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯಬೇಕು ಮತ್ತು ಪ್ರವಾಸಿಗರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು.

ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ಮರ ಮತ್ತು ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು. ದುರ್ಬಲವಾದ ಅಥವಾ ಹಳೆಯ ಕಟ್ಟಡ ಅಥವಾ ಮರಗಳ ಸಮೀಪ ಮತ್ತು ಮರಗಳ ಕೆಳಗೆ ನಿಲ್ಲಬಾರದು. ಈ ಎಲ್ಲಾ ಅಂಶಗಳನ್ನು ಗುಡುಗು, ಸಿಡಿಲು ಹಾಗೂ ಮಳೆ ಗಾಳಿಯಂತಹ ಸಂದರ್ಭಗಳಲ್ಲಿ ಚಾಚೂ ತಪ್ಪದೇ ಕಡ್ಡಾಯವಾಗಿ ಪಾಲಿಸಬೇಕು.

ಸಾರ್ವಜನಿಕರು ಅಗತ್ಯವಿದ್ದಲ್ಲಿ ಮುಂಜಾಗೃತ ಕ್ರಮವಾಗಿ ಸಮೀಪದ ಕಾಳಜಿ ಕೇಂದ್ರದಲ್ಲಿ ಉಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಶುಲ್ಕ ರಹಿತ 1077, ದೂರವಾಣಿ ಸಂಖ್ಯೆ: 0820-2574802 ಅಥವಾ ಆಾಂ ತಾಲೂಕಾ ತಹಶೀಲ್ದಾರರ ಕಛೇರಿಗೆ ಕರೆ ಮಾಡಬಹುದಾಗಿದೆ.

ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ನಿಭಾಯಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀನುಗಾರರಿಗೆ ಎಚ್ಚರಿಕೆ

ಕರ್ನಾಟಕದ ಕರಾವಳಿಯಲ್ಲಿ ಮೇ 23ರವರೆಗೆ ಗಂಟೆಗೆ 35-55 ಕಿಮೀ ವೇಗದಲ್ಲಿ ಮತ್ತು ಪಶ್ಚಿಮ ಮಧ್ಯ ಅರೇಬಿಯನ್ ಸಮುದ್ರ ಮತ್ತು ನೈಋತ್ಯ ಅರೇಬಿಯನ್ ಸಮುದ್ರದ ಪಶ್ಚಿಮ ಭಾಗಗಳಲ್ಲಿ ಗಂಟೆಗೆ 45 ಕಿಮೀ ನಿಂದ 50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಮೀನುಗಾರರು ಈ ಸಮುದ್ರ ಪ್ರದೇಶಗಳಿಗೆ ಇಳಿಯದಂತೆ ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News