×
Ad

ಗಂಗೊಳ್ಳಿ ದೋಣಿ ದುರಂತ: 3ನೇ ಮೀನುಗಾರನ ಮೃತದೇಹವೂ ಪತ್ತೆ

Update: 2025-07-17 20:59 IST

ಕುಂದಾಪುರ, ಜು.17: ಮಂಗಳವಾರ ಬೆಳಿಗ್ಗೆ ಗಂಗೊಳ್ಳಿ ಅಳಿವೆ ಬಾಗಿಲಿನ ಹೊರ ಭಾಗದಲ್ಲಿ ನಡೆದ ನಾಡದೋಣಿ ದುರಂತದಲ್ಲಿ ನಾಪತ್ತೆಯಾದ ಗಂಗೊಳ್ಳಿಯ ಮೂರನೇ ಮೀನುಗಾರನ ಮೃತದೇಹ ಇಂದು ಮುಂಜಾನೆ ಪತ್ತೆಯಾಗುವುದರೊಂದಿಗೆ ಎಲ್ಲಾ ಮೂವರ ಮೃತದೇಹಗಳು ಸಿಕ್ಕಂತಾಗಿದೆ.

ಗುರುವಾರ ಮುಂಜಾನೆ ಕುಂದಾಪುರ ಕೋಡಿ ಸಿವಾಕ್ ಸಮೀಪದ ಸಮುದ್ರದಲ್ಲಿ ಸುರೇಶ್ ಖಾರ್ವಿ (48) ಅವರ ಮೃತದೇಹ ಪತ್ತೆಯಾಯಿತು. ನೀರು ಪಾಲಾದವರಲ್ಲಿ ಲೋಹಿತ್ ಖಾರ್ವಿ (34) ಅವರ ಶವ ಬುಧವಾರ ಬೆಳಗಿನ ಜಾವ 4 ಗಂಟೆಯ ವೇಳೆಗೆ ಕುಂದಾಪುರದ ಲೈಟ್‌ಹೌಸ್ ಪ್ರದೇಶ ದಲ್ಲಿ ದೊರಕಿದ್ದರೆ, ಸಂಜೆ ವೇಳೆಗೆ ಇನ್ನೊಬ್ಬ ಮೀನುಗಾರ ಜಗನ್ನಾಥ್ (50) ಅವರ ಮೃತದೇಹ ಕೋಡಿ ಕಿನಾರೆ ಹಳೆ ಅಳಿವೆ ಬಳಿ ಪತ್ತೆಯಾಗಿತ್ತು.

ಘಟನೆ ಹಿನ್ನೆಲೆ: ಮಂಗಳವಾರ ಬೆಳಿಗ್ಗೆ ಮೀನುಗಾರಿಕೆಗೆಂದು ಅರಬ್ಬಿ ಕಡಲಿಗೆ ತೆರಳಿದ್ದ ಗಂಗೊಳ್ಳಿಯ ನಾಲ್ವರು ಮೀನುಗಾರರಿದ್ದ ನಾಡದೋಣಿ ಕಡಲಿನ ಅಬ್ಬರಕ್ಕೆ ಮಗುಚಿ ಬಿದ್ದು, ಮೂವರು ನೀರು ಪಾಲಾಗಿ, ಒಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ನಾಪತ್ತೆಯಾಗಿದ್ದ ಮೀನುಗಾರರ ಹುಡುಕಾಟಕ್ಕೆ ಮಂಗಳವಾರ ಬೆಳಿಗ್ಗೆಯಿಂದಲೇ ಕರಾವಳಿ ಕಾವಲು ಪಡೆಯವರು, ಪೊಲೀಸರು, ಮುಳುಗು ತಜ್ಞರು ನಿರಂತರ ಪ್ರಯತ್ನ ನಡೆಸಿದ್ದರು.

ಆಧುನಿಕ ತಂತ್ರಜ್ಞಾನ ಬಳಸಿ 5 ಕಿ.ಮೀ. ವ್ಯಾಪ್ತಿಯ ದೂರವನ್ನು ತೋರಿಸುವ ಡ್ರೋಣ್ ಕ್ಯಾಮೆರಾ ಬಳಸಿ, ನಾಪತ್ತೆಯಾದ ಮೀನುಗಾರರ ಪತ್ತೆಗೂ ಪ್ರಯತ್ನಿಸಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಹರಿರಾಮ್ ಶಂಕರ್ ಹಾಗೂ ಕರಾವಳಿ ಕಾವಲು ಪಡೆಯ ಎಸ್‌ಪಿ ಮಿಥುನ್ ಕುಮಾರ್ ಅವರು ಪತ್ತೆ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ಪತ್ತೆ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಬಳಕೆ ಮಾಡಿ ಕೊಳ್ಳುವ ಕುರಿತು ಸಹ ಪ್ರಸ್ತಾಪಗಳು ಬಂದಿದ್ದವು.

ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ್ ಗಂಟಿಹೊಳೆ, ಎ.ಕಿರಣ್‌ಕುಮಾರ ಕೊಡ್ಗಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮುಂತಾದವರು ಮೃತರ ಕುಟುಂಬಿಕರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ, ಸರಕಾರದಿಂದ ಗರಿಷ್ಠ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News